ಮಂಡ್ಯ...ಫಲಿತಾಂಶ ಮುನ್ನವೇ ಮೈತ್ರಿ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ

KannadaprabhaNewsNetwork | Published : Apr 29, 2024 1:31 AM

ಸಾರಾಂಶ

ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ನಮ್ಮ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾವೇರಿ ಹೋರಾಟಕ್ಕೆ ಒಬ್ಬ ಉತ್ತಮ ನಾಯಕನ ಅವಶ್ಯಕತೆ ಇತ್ತು. ಅದು ಸಾಧ್ಯವಾಗಿದೆ. ಈ ಬಾರಿ ಶೇ.೮೦ರಷ್ಟು ಜನರು ಕುಮಾರಸ್ವಾಮಿಗೆ ಮತ ಹಾಕಿದ್ದಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.

ಕನ್ನಡಪ್ರಭ ವಾರ್ತೆ ಭಾರತೀನಗರ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆಂದು ಫಲಿತಾಂಶ ಹೊರಬೀಳುವ ಮುನ್ನವೇ ಕಾರ್ಯಕರ್ತರು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಮೆಳ್ಳಹಳ್ಳಿಯಲ್ಲಿ ಸಿಹಿ ತಿನಿಸಿ ವಿಜಯೋತ್ಸವ ಆಚರಿಸಿದರು.

ಮೆಳ್ಳಹಳ್ಳಿ, ಕೆ.ಪಿ.ದೊಡ್ಡಿ, ಮಣಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಕುಮಾರಸ್ವಾಮಿ ಅಭಿಮಾನಿಗಳು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಸಿಹಿ ತಿನಿಸಿ ಅಭಿನಂದಿಸಿ, ಜನರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರ ಮೇಲಿನ ಅಭಿಮಾನದಿಂದ ಮತದಾರರು ಇಂದು ಉತ್ತಮ ಫಲಿತಾಂಶ ನೀಡುತ್ತಾರೆಂಬ ನಂಬಿಕೆ ಕಾರ್ಯಕರ್ತರಲ್ಲಿದೆ. ಹಾಗಾಗಿ ಕಾರ್ಯಕರ್ತರು ಈಗಾಗಲೇ ವಿಜಯೋತ್ಸವವನ್ನು ಆಚರಣೆ ಮಾಡುತ್ತಿರುವುದು ಕ್ಷೇತ್ರದಲ್ಲಿ ಕಂಡುಬರುತ್ತಿದೆ. ಇದರಿಂದ ನನಗೂ ಸಂತಸ ತಂದಿದೆ ಎಂದರು.

ಯಾರೋ ಒಬ್ಬ ಉದ್ಯಮಿಯನ್ನು ಚುನಾವಣೆಯಲ್ಲಿ ಕರೆತಂದು ಕುಮಾರಸ್ವಾಮಿ ಅವರ ಮುಂದೆ ಹರಕೆಯ ಕುರಿಯನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಚುನಾವಣೆಗೂ ಮುನ್ನ ಜಿಲ್ಲೆಯ ಜನರ ಕಷ್ಟಸುಖಗಳಿಗೆ ಸ್ಪಂದಿಸಿದ್ದಾರಾ? ಅಥವಾ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರಾ? ಎಂಬುದನ್ನು ಜನರು ಚಿಂತಿಸಿ ಕುಮಾರಸ್ವಾಮಿ ಅವರಿಗೆ ಬಹುಮತ ನೀಡಿದ್ದಾರೆ ಎನ್ನುವುದು ಇದರಿಂದಲೇ ತಿಳಿಯುತ್ತಿದೆ ಎಂದು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ನಮ್ಮ ಕ್ಷೇತ್ರದಲ್ಲಿ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕಾವೇರಿ ಹೋರಾಟಕ್ಕೆ ಒಬ್ಬ ಉತ್ತಮ ನಾಯಕನ ಅವಶ್ಯಕತೆ ಇತ್ತು. ಅದು ಸಾಧ್ಯವಾಗಿದೆ. ಈ ಬಾರಿ ಶೇ.೮೦ರಷ್ಟು ಜನರು ಕುಮಾರಸ್ವಾಮಿಗೆ ಮತ ಹಾಕಿದ್ದಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಎದುರು ಸ್ಪರ್ಧಿಸುವಾಗ ಕಾಂಗ್ರೆಸ್ ಅಭ್ಯರ್ಥಿ ಯೋಚಿಸಬೇಕಿತ್ತು. ಅಲ್ಲದೆ ಕಾಂಗ್ರೆಸ್ ಶಾಸಕರು ಸಹ ದುಡ್ಡಿನಿಂದಲೇ ಎಲ್ಲವನ್ನೂ ಮಾಡಬಹುದು ಎಂಬುದನ್ನು ಬಿಡುವಂತೆ ಹೇಳಿದರು.

ಜೆಡಿಎಸ್ ಜಿಲ್ಲಾ ಗೌರವಾಧ್ಯಕ್ಷ ಎಚ್.ಎಂ.ಮರಿಮಾದೇಗೌಡ, ತಾಲೂಕು ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಕರಿಯಪ್ಪ, ಸದಸ್ಯರಾದ ತಿಬ್ಬಯ್ಯ, ಮುಖಂಡರಾದ ಕೆ.ಎಲ್.ಶಿವರಾಮು, ಕೆ.ಟಿ.ಸುರೇಶ್, ಮಣಿಗೆರೆ, ಕೆ.ಪಿ.ದೊಡ್ಡಿ ಮುಖಂಡರು ಹಾಜರಿದ್ದರು.

Share this article