ಉಪಚುನಾವಣೆಯಲ್ಲಿ ಗೆಲುವು: ಕಾಂಗ್ರೆಸ್‌ ಕಾರ್ಯಕರ್ತರಿಂದ ವಿಜಯೋತ್ಸವ

KannadaprabhaNewsNetwork | Published : Nov 24, 2024 1:47 AM

ಸಾರಾಂಶ

ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ‌ಯಾಸಿರ್ ಪಠಾಣ್ ಗೆಲುವು ಸಾಧಿಸಿದ ಹಿನ್ನೆಲೆ ಶನಿವಾರ ಬೆಳಗಾವಿ ‌ನಗರದ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೊಪಯೋಗಿ ಸಚಿವ ಸತೀಶ ಜಾರಕಿಹೊಳಿ ಆಗಮಿಸುತ್ತಿದ್ದಂತೆ ಕಾಂಗ್ರೆಸ್‌ ಕಾರ್ಯಕರ್ತರು ಸಿಹಿ ತಿನ್ನಿಸಿ ಪಟಾಕಿ ಸಿಡಿಸಿ, ಪುಷ್ಪಾರ್ಚನೆ ಮಾಡಿ ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಎಂದು ಘೋಷಣೆ ಕೂಗಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲ್ಲಿಸಲು ಬೆಳಗಾವಿಯ ಹಲವು ಕಾರ್ಯಕರ್ತರು ಶ್ರಮಿಸಿದ್ದು, ನಿಮ್ಮ ಶ್ರಮಕ್ಕೆ ಇಂದು ಪ್ರತಿಫಲ ದೊರೆತಿದೆ. ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಐತಿಹಾಸಿಕ ಗೆಲುವಾಗಿದೆ ಎಂದು ಹೇಳಿದರು.

ಶಿಗ್ಗಾಂವಿಯಲ್ಲಿ ಅಹಿಂದ ಮತ ಪಡೆಯುವಲ್ಲಿ ನಾವು ಸಫಲರಾಗಿದ್ದೇವೆ. ಸುಮಾರು ಜನ ಚುನಾವಣೆಯಲ್ಲಿ ಭಾಗವಹಿಸಿ, ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಕೆಲಸಗಳು, ಯೋಜನೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿದ್ದರಿಂದ ಪಕ್ಷದ ಅಭ್ಯರ್ಥಿಗೆ ಜಯ ಸಿಕ್ಕಿದೆ ಎಂದ ಅವರು, ಗೆಲುವಿಗೆ ಶ್ರಮಿಸಿದ ಸರ್ವರಿಗೂ ಅಭಿನಂದನೆ ಸಲ್ಲಿಸಿದರು.

ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾತನಾಡಿ, ಬೇರೆ, ಬೇರೆ ನಾಯಕರು ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯವೈಖರಿ ಅನುಸರಿಸಲಿ, ಶಿಗ್ಗಾಂವಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಅಸಾಧ್ಯವೆಂಬ ಭಾವನೆ ಎಲ್ಲರಲ್ಲೂ ಇತ್ತು. ಅದನ್ನೂ ಮೀರಿ ಕಾಂಗ್ರೆಸ್‌ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.

ಮುಗಿಲು ಮುಟ್ಟಿದ ಸಂಭ್ರಮ: ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಂದಾಗಿ ತೆರವಾಗಿದ ಶಾಸಕ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ವಿಶೇಷ ಪ್ರಯತ್ನದಿಂದ ಕೈ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಗೆಲುವಾಗಿದ್ದರಿಂದ ಬೆಳಗಾವಿ ಕಾಂಗ್ರೆಸ್‌ ಭವನ ಎದುರು ಸಚಿವ ಸತೀಶ ಜಾರಕಿಹೊಳಿ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಕಾಂಗ್ರೆಸ್ ಪಕ್ಷಕ್ಕೆ, ಸಿಎಂ ಸಿದ್ದರಾಮಯ್ಯ‌ ಹಾಗೂ ಸಚಿವ ಸತೀಶ ಜಾರಕಿಹೊಳಿ‌ ಗೆ ಜೈಕಾರ ಹಾಕಿ ಸಂಭ್ರಮಿಸಿದರು.

Share this article