ಕನ್ನಡಪ್ರಭ ವಾರ್ತೆ ಮಳವಳ್ಳಿ/ಹಲಗೂರು
ಈ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಲಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ವಿಶ್ವಾಸ ವ್ಯಕ್ತಪಡಿಸಿದರು.ಮಳವಳ್ಳಿ ತಾಲೂಕಿನ ಗ್ರಾಪಂಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಜನರು ತೋರುತ್ತಿರುವ ಪ್ರೀತಿ, ಅಭಿಮಾನ ನನ್ನ ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಸುಡುಬಿಸಿಲಿನಲ್ಲೂ ಜನರು ರಸ್ತೆಯಲ್ಲಿ ನನಗಾಗಿ ಕಾಯುತ್ತ ನಿಂತಿರುವುದನ್ನು ಕಂಡರೆ ಅವರ ಪ್ರೀತಿ, ವಿಶ್ವಾಸಕ್ಕೆ ಚಿರ ಋಣಿಯಾಗಿದ್ದಾನೆ. ಚುನಾವಣೆಯಲ್ಲಿ ಗೆಲುವು ನಿಶ್ಚಿತವಾಗಿದ್ದು ಜನ ಸೇವೆ ಖಚಿತ ಎಂದರು.ರೈತಾಪಿ ವರ್ಗವೇ ಹೆಚ್ಚಾಗಿರುವ ಮಳವಳ್ಳಿ ತಾಲೂಕು ಅನೇಕ ಪ್ರವಾಸಿತಾಣಗಳು, ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಕೇಂದ್ರದಿಂದ ವಿಶೇಷ ಅನುದಾನ ತಂದು ಇಲ್ಲಿನ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಜನರು ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು.
ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ರೈತರ ಕಷ್ಟ-ಸುಖ ಗೊತ್ತಿದೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸಂಸತ್ತಿನಲ್ಲಿ ಜನರ ದನಿಯಾಗಲು ಬಂದಿದ್ದೇನೆ. ಜನ ನನ್ನನ್ನು ಆಶೀರ್ವದಿಸುವ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಉದ್ಯಮಿಗಳು, ಬಂಡವಾಳಶಾಹಿಗಳ ೨೬ ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆಯೂ ಆಲೋಚಿಸಲಿಲ್ಲ ಎಂದು ಟೀಕಿಸಿದರು.
ಕೋಮುವಾದಿ ಪಕ್ಷದ ಜೊತೆ ಸೇರಿಕೊಂಡಿರುವ ಜೆಡಿಎಸ್ ಕೂಡ ಬಿಜೆಪಿ ಚಿಂತನೆಗಳನ್ನೇ ತಲೆಗೆ ತುಂಬಿಕೊಳ್ಳುತ್ತಿದೆ. ಎಚ್.ಡಿ.ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು, ಅವರ ಮಗ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಆದರೂ ಕಾಂಗ್ರೆಸ್ ಪಕ್ಷವನ್ನು ಮುಗಿಸುವುದಕ್ಕಾಗಿ ಬಿಜೆಪಿಯವರ ಜೊತೆ ಸೇರಿಕೊಂಡಿದ್ದಾರೆ. ಅಧಿಕಾರದೊಂದಿಗೆ ಗೌರವ ಕೊಟ್ಟವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ ಎಂದು ಆರೋಪಿಸಿದರು.೨೦೧೮ರಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜಿಲ್ಲೆಯ ಜನರು ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದರು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆದರು. ಆದರೆ, ಜಿಲ್ಲೆಗೆ ಕೊಟ್ಟ ಕೊಡುಗೆ ಶೂನ್ಯ. ಅಧಿಕಾರವಿದ್ದ ಸಮಯದಲ್ಲೇ ಶಾಶ್ವತವಾದ ಯಾವೊಂದು ಕೊಡುಗೆಯನ್ನು ನೀಡಲಿಲ್ಲ. ಈಗ ಸಂಸದರಾಗಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುತ್ತೇನೆ, ನೀರಾವರಿ ಯೋಜನೆಗಳನ್ನು ತರುವುದಾಗಿ ಹೇಳುತ್ತಿರುವ ಮಾತನ್ನು ನಂಬಲು ಸಾಧ್ಯವೇ. ಈ ಜಿಲ್ಲೆಯ ಜನರು ಅಷ್ಟೊಂದು ಮೂರ್ಖರಲ್ಲ. ಅವರಿಗೂ ಯೋಚಿಸುವ ಶಕ್ತಿ ಇದೆ ಎಂದು ತಿಳಿಸಿದರು.
ಸಾಧನೆಗಳನ್ನು ನಾವು ಮಾತನಾಡಬಾರದು. ಸಾಧನೆಗಳೇ ಮಾತಾಗಬೇಕು. ಕಸಬಾ-ಹಲಗೂರು ಹೋಬಳಿ ಜನರ ಕುಡಿಯುವ ನೀರಿಗೆ ೫೦೦ ಕೋಟಿ ರು. ಮಂಜೂರಾತಿ ದೊರಕಿಸಿ ೧೫೪ ಕೋಟಿ ರು. ಬಿಡುಗಡೆ ಮಾಡಿಸಿದ್ದೆ. ತಿಟ್ಟಮಾರನಹಳ್ಳಿ ಏತ ನೀರಾವರಿ ಯೋಜನೆಯನ್ನು ರೂಪಿಸಿದ್ದೆ. ಈ ಎರಡೂ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಿಲ್ಲ. ನಾನು ಹಾಡು ಹೇಳಿಕೊಂಡು ಸುಳ್ಳು ಹೇಳಿಕೊಂಡು ಓಡಾಡುತ್ತಿಲ್ಲ. ಜನರು ನನಗೆ ಚುನಾವಣೆಯಲ್ಲಿ ಓಟಿನ ಲೆಕ್ಕ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿವೃದ್ಧಿಯ ಲೆಕ್ಕ ಕೊಡುತ್ತಿದ್ದೇನೆ ಎಂದು ಹೇಳಿದರು.ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಕಳೆದ ಐದು ತಿಂಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದೀರಿ. ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಮನಸ್ಸಿದ್ದರೆ ಮೇಕೆದಾಟು ಯೋಜನೆಗೆ ಅನುಮೋದನೆ ದೊರಕಿಸಬೇಕಿತ್ತು. ಕಾವೇರಿ ನೀರಿನ ಸಮಸ್ಯೆಗೆ ನ್ಯಾಯ ದೊರಕಿಸಬೇಕಿತ್ತು. ಆಗ ನೀವು ಬಂದು ರೈತರಿಗಾಗಿ ಈ ಯೋಜನೆಗಳಿಗೆ ಅನುಮತಿ ದೊರಕಿಸಿಕೊಂಡು ಬಂದಿದ್ದೇನೆ. ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವಂತೆ ಕೇಳುವ ನೈತಿಕತೆ ನಿಮಗಿರುತ್ತಿತ್ತು. ಏನನ್ನೂ ಮಾಡದೆ ಕೇವಲ ರಾಜಕೀಯ ಸ್ವಾರ್ಥ ಸಾಧನೆಗೆ ಬಿಜೆಪಿ ಜೊತೆ ಸೇರಿಕೊಂಡಿದ್ದೀರಿ. ನಿಮ್ಮನ್ನು ಜನರು ನಂಬುವುದಿಲ್ಲ ಎಂದು ನೇರವಾಗಿ ಹೇಳಿದರು.
ಪಕ್ಷ ಸೇರ್ಪಡೆ:ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿ, ಅಟ್ಟುವನಹಳ್ಳಿ ಭಾಗದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅನ್ಯ ಪಕ್ಷದ ಮುಖಂಡರು ಶಾಸಕ ನರೇಂದ್ರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಮಳವಳ್ಳಿ ತಾಲೂಕಿನಲ್ಲಿ ಪ್ರಚಾರ:ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ರ್ಸ್ಟಾ ಚಂದ್ರು) ಅವರು ಮಳವಳ್ಳಿ ತಾಲೂಕಿನ ಹಲವೆಡೆ ಮತಯಾಚನೆ ಮಾಡಿದರು. ತಾಲೂಕಿನ ದಳವಾಯಿ ಕೋಡಿಹಳ್ಳಿ, ಹೆಚ್.ಬಸವನಪುರ, ಕರಲ್ಲುಕಟ್ಟೆ, ಹಲಗೂರು, ಲಿಂಗಪಟ್ಟಣ, ನಿಟ್ಟೂರು, ಯತ್ತಂಬಾಡಿ, ಟಿ.ಕೆ.ಹಳ್ಳಿ, ಹುಸ್ಕೂರು, ಅಗಸನಪುರ, ಹಾಡ್ಲಿ, ಹಲಸಹಳ್ಳಿ, ಧನಗೂರು, ನಿಡಘಟ್ಟ, ಕಂದೇಗಾಲ, ನೆಲಮಾಕನಹಳ್ಳಿ, ನಾಗೇಗೌಡನದೊಡ್ಡಿ, ಚೊಟ್ಟನಹಳ್ಳಿ, ಪಂಡಿತಹಳ್ಳಿ, ಹೊಸಹಳ್ಳಿ, ಕುಂದೂರು, ಕ್ಯಾತನಹಳ್ಳಿ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಶಿವಣ್ಣ ಸೇರಿದಂತೆ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಇದ್ದರು.