ಆಶಾ ಕಾರ್ಯಕರ್ತೆಯರಿಂದ 13, 14ಕ್ಕೆ ವಿಧಾನಸೌಧ ಚಲೋ: ಮಂಜುನಾಥ ಕುಕ್ಕವಾಡ

KannadaprabhaNewsNetwork |  
Published : Feb 07, 2024, 01:47 AM IST
6ಕೆಡಿವಿಜಿ4-ದಾವಣಗೆರೆಯಲ್ಲಿ ಮಂಗಳವಾರ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ, ಅಣಬೇರು ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತೆಯರು ಹೋರಾಟದ ಪೋಸ್ಟರ್ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ರಾಜ್ಯಾದಾದ್ಯಂತ ಸುಮಾರು 43 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಆಶಾರನ್ನು ವಂಚಿಸುತ್ತಿರುವ ಆರ್‌ಸಿಎಚ್‌ ಪೋರ್ಟಲ್‌ನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡಿ ಲಿಂಕ್ ಮಾಡಬೇಕು. 8 ವರ್ಷದ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಆರ್‌ಸಿಎಚ್‌ ಪೋರ್ಟಲ್‌ಗೆ ಲಿಂಕ್ ಆಶಾ ಕಾರ್ಯಕರ್ತೆಯರಿಗೆ ಶಾಪವಾಗಿ ಕಾಡುತ್ತಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 15 ಸಾವಿರ ರು. ವೇತನ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಫೆ.13 ಮತ್ತು 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕುಕ್ಕವಾಡ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಫೆ.13 ಮತ್ತು 14ರ ಬೆಳಿಗ್ಗೆ 10.30ರಿಂದ ಎರಡೂ ದಿನ ಸಂಘದ ನೇತೃತ್ವದಲ್ಲಿ ದಾವಣಗೆರೆಯಿಂದ 1,300 ಮಂದಿ ಸೇರಿ ರಾಜ್ಯದ ವಿವಿಧೆಡೆಯಿಂದ ಸುಮಾರು 20 ಸಾವಿರ ಜನ ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯಾದಾದ್ಯಂತ ಸುಮಾರು 43 ಸಾವಿರ ಆಶಾ ಕಾರ್ಯಕರ್ತೆಯರಿದ್ದು, ಆಶಾರನ್ನು ವಂಚಿಸುತ್ತಿರುವ ಆರ್‌ಸಿಎಚ್‌ ಪೋರ್ಟಲ್‌ನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡಿ ಲಿಂಕ್ ಮಾಡಬೇಕು. 8 ವರ್ಷದ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಆರ್‌ಸಿಎಚ್‌ ಪೋರ್ಟಲ್‌ಗೆ ಲಿಂಕ್ ಆಶಾ ಕಾರ್ಯಕರ್ತೆಯರಿಗೆ ಶಾಪವಾಗಿ ಕಾಡುತ್ತಿದೆ. ವಿವಿಧ ದಾಖಲೆಗಳ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಶೇ.25-30ರಷ್ಟು ಅಂದರೆ 10ರಿಂದ 12 ಸಾವಿರ ಆಶಾಗಳು ಆರ್‌ಸಿಎಚ್ ಪೋರ್ಟಲ್‌ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ದೂರಿದರು.

ಬಡ ಆಶಾ ಮಹಿಳೆಯರು ದುಡಿದ ಹಣ ಹೀಗೆ ಸೋರಿಕೆಯಾಗುತ್ತಿದೆ. ಇದನ್ನು ಸರಿಪಡಿಸಲು ಸಂಘವು ಸಾಕಷ್ಟು ಸಲ ಒತ್ತಾಯಿಸಿ, ಪ್ರತಿಭಟಿಸಿದ್ದರೂ ಪ್ರಯೋಜನವಾಗಿಲ್ಲ. ಆರೋಗ್ಯ ಸಚಿವರು, ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ಅನೇಕ ಸುತ್ತಿನ ಮಾತುಕತೆ ನಡೆಸಿ, ದಾಖಲೆಗಳ ಸಂಘ ನೀಡಿದ್ದರೂ ಆರೋಗ್ಯ ಇಲಾಖೆಯು ಪೋರ್ಟಲ್‌ ಗೆ ಲಿಂಕ್ ಮಾಡಿ, ಪ್ರೋತ್ಸಾಹಧನ ನೀಡುವ ಮೂದರಿ ಉಳಿಸಿಕೊಳ್ಳುವ ತನ್ನ ಹಠಮಾರಿ ಧೋರಣೆ ಮುಂದುವರಿಸುತ್ತಿರುವುದು ಸರಿಯಲ್ಲ. ಮೂಗಿಗೆ ತುಪ್ಪ ಸವರುವಂತೆ ಕೆಲ ಪರಿಹಾರ ನೀಡಲು ಇಲಾಖೆ ಮುಂದಾಯಿತೆ ಹೊರತು, ಸಮಸ್ಯೆಗಳ ಆಳಕ್ಕೆ ಇಳಿಯಲಿಲ್ಲ. ಅವುಗಳನ್ನು ಪರಿಹರಿಸುವ ಪ್ರಯತ್ನವನ್ನೂ ಮಾಡಲಿಲ್ಲ ಎಂದು ಆರೋಪಿಸಿದರು.

ಕೇಂದ್ರ, ರಾಜ್ಯ ಸರ್ಕಾರದಿಂದ ಕನಿಷ್ಠ 15 ಸಾವಿರ ರು. ವೇತನ ನಿಗದಿಪಡಿಸಬೇಕು. ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳ ಹೊರೆ ಹೇರಬಾರದು. ಮೊಬೈಲ್ ಆಧಾರಿತ ಕೆಲಸಗಳ ಒತ್ತಾಯಪೂರ್ವಕವಾಗಿ ಯಾವುದೇ ಕಾರಣಕ್ಕೂ ಮಾಡಿಸಬಾರದು. ಹಲವು ವರ್ಷದಿಂದ ಬಾಕಿ ಇರುವ ಪ್ರೋತ್ಸಾಹಧನ ತಕ್ಷಣ ಬಿಡುಗಡೆ ಮಾಡಬೇಕು. ಆಶಾ ಮಹಿಳೆಯರಿಗೆ 15 ಸಾವಿರ ರು. ನಿಶ್ಚಿತ ವೇತನ ನೀಡುವ ಜೊತೆಗೆ ಇನ್ನಿತರೆ ನ್ಯಾಯಸಮ್ಮತವಾದ ಬೇಡಿಕೆಗಳ ಈಡೇರಿಸಲು ಹೋರಾಟ ನಡೆಸಲಾಗುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕಿನ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

ಸಂಘದ ಮುಖಂಡರಾದ ತಿಪ್ಪೇಸ್ವಾಮಿ ಅಣಬೇರು, ಭಾರತಿ, ಅನಿತಾ, ತಿಪ್ಪಮ್ಮ, ಮಂಜುಳಮ್ಮ, ಆಶಾ, ಹಾಲಮ್ಮ, ದೇವಮ್ಮ, ಭಾಗ್ಯಮ್ಮ, ಮಂಜಮ್ಮ, ಶೋಭ, ರಾಧಮ್ಮ, ತುಳುಸಮ್ಮ ಇತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌