ಫೆ. 13ರಂದು ವಿಧಾನಸೌಧ ಚಲೋ ಆಶಾಗಳಿಂದ ಧರಣಿ

KannadaprabhaNewsNetwork | Updated : Feb 11 2024, 03:43 PM IST

ಸಾರಾಂಶ

ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಧಾರವಾಡ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಫೆಬ್ರವರಿ 13-14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ‘ವಿಧಾನ ಸೌಧ ಚಲೋ’ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಮುಂದೆ ಶನಿವಾರ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಭುವನಾ ಬಳ್ಳಾರಿ, ಎಂಟು ವರ್ಷಗಳ ಹಿಂದೆ ರಾಜ್ಯ ಸರ್ಕಾರ, ಜಾರಿಗೊಳಿಸಿದ ಆರ್.ಸಿ.ಹೆಚ್. ಪೋರ್ಟಲ್‌ಗೆ ಲಿಂಕ್ ಮಾಡಿದ್ದು, ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿದೆ. 

ವಿವಿಧ ದಾಖಲೆಗಳ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಶೇ.25-30ರಷ್ಟು ಅಂದರೆ 10 ಸಾವಿರದಿಂದ 12 ಸಾವಿರ ಆಶಾಗಳು ಆರ್.ಸಿ.ಹೆಚ್. ಪೋರ್ಟಲ್‌ನ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗಿದ್ದಾರೆ. ಆಶಾಗಳು ಕಷ್ಟಪಟ್ಟುದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣಎಲ್ಲಿ ಹೋಗುತ್ತಿದೆ?ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ.

ಇದನ್ನು ಸರಿಪಡಿಸುವಂತೆ ಸಂಘ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ, ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಸಾಕಷ್ಟು ದಾಖಲೆಗಳನ್ನೂ ಸಂಘ ನೀಡಿದೆ. 

ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್‌ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ಉಳಿಸಿಕೊಳ್ಳುವ ತನ್ನ ಹಠಮಾರಿಧೋರಣೆಯನ್ನು ಮುಂದುವರಿಸಿದೆ.

 ‘ಮೂಗಿಗೆ ತುಪ್ಪ ಸವರಿದಂತೆ’ ಕೆಲವು ಪರಿಹಾರ ನೀಡಲು ಆರೋಗ್ಯ ಇಲಾಖೆ ಮುಂದಾಯಿತೆ ಹೊರತು, ಸಮಸ್ಯೆಗಳ ಆಳಕ್ಕೆ ಇಳಿಯಲೇ ಇಲ್ಲ. ಈ ಮೂಲಕ ಆರೋಗ್ಯ ಇಲಾಖೆ ಸುಮ್ಮನೆ ಕಾಲಹರಣ ಮಾಡಿದೆಯೇ ಹೊರತು, ಬೇರೆ ಏನು ಸಾಧನೆಗೈಯಲಿಲ್ಲ ಎಂದರು.

ಈ ಎಲ್ಲ ಸಮಸ್ಯೆಗಳ ಏಕೈಕ ಪರಿಹಾರವೆಂದರೆ ಆಶಾಗಳ ವೇತನ ಪಾವತಿ ಪ್ರಕ್ರಿಯೆಯನ್ನು ಆರ್.ಸಿ.ಹೆಚ್ ಪೋರ್ಟಲ್ ನಿಂದ ಡಿ-ಲಿಂಕ್ ಮಾಡುವುದು. 

ಈ ಹಿನ್ನಲೆಯಲ್ಲಿ, ಈ ಬೇಡಿಕೆಯ ಜೊತೆಗೆ ₹15000 ನಿಶ್ಚಿತ ವೇತನ ನೀಡುವಂತೆ, ಇನ್ನಿತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲ ಆಶಾ ಸೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು.

ಜಿಲ್ಲಾ ಮುಖಂಡರಾದ ಸ್ನಪ್ನಾ ಸುಳ್ಳದ, ರಾಧಾ ವೀರಕರ, ರೂಪಾ ಅನಂತಪುರ, ಸುಜಾತಾ ಮಡ್ಡಿ, ಬಸಮ್ಮ ಅಕ್ಕಮರಡಿ, ಲತಾ ಗೋಳಿ, ಚೈತ್ರಾ ಬಟ್ಟೂರ, ರಜಿಯಾ ಜವಳಿ, ರಾಜೇಶ್ವರಿ ಬೂದಪ್ಪನವರ, ಮಹೇಶ್ವರಿ ಕಿತ್ತೂರ ಇದ್ದರು.

Share this article