ಕನ್ನಡಪ್ರಭ ವಾರ್ತೆ ಹಾಸನ
ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹತ್ತು ಹಲವಾರು ಸಮಸ್ಯೆಗಳಿದ್ದು, ರಾಜ್ಯ ಸರ್ಕಾರವು ಕೂಡಲೇ ಬಗೆಹರಿಸಬೇಕು ಎಂದು ಅಂಗನವಾಡಿಗಳನ್ನು ಉಳಿಸಿ, ಅಂಗನವಾಡಿಗಳನ್ನು ಬಲಪಡಿಸಿ ಎಂಬ ಘೋಷಣೆಯೊಂದಿಗೆ ಸೆ.19ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಂಚಾಲಕ ಎಂ.ಸಿ. ಡೋಂಗ್ರೆ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ದೇಶದ ಬಡ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಎದುರಿಸುತ್ತಿರುವ ಪೌಷ್ಟಿಕತೆ, ರಕ್ತಹೀನತೆ, ಆರೋಗ್ಯ ಸಮಸ್ಯೆಗಳನ್ನು ತೊಡೆದು ಹಾಕುವ ಹಿನ್ನೆಲೆಯಲ್ಲಿ 50 ವರ್ಷಗಳ ಹಿಂದೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯು (ಐ.ಸಿ.ಡಿ.ಎಸ್) ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾ ಬಂದಿದೆ. ಈ ಯೋಜನೆಯಡಿಯಲ್ಲಿ ದೇಶಾದ್ಯಂತ 14 ಲಕ್ಷದಷ್ಟು ಹಾಗೂ ಕರ್ನಾಟಕದಲ್ಲಿ ಸುಮಾರು 70 ಸಾವಿರ ಅಂಗನವಾಡಿ ಕೇಂದ್ರಗಳು ಕಾರ್ಯೋನ್ಮುಖವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ಅಂಗನವಾಡಿ ಸಂಘಟನೆಗಳು ಸಂಯುಕ್ತ ಸಂಘರ್ಷ ಸಮಿತಿ ಎಂಬ ಐಕ್ಯ ವೇದಿಕೆಯಲ್ಲಿ ಸರ್ಕಾರದ ಗಮನ ಸೆಳೆಯಲು ಸೆ. 19ರಂದು ವಿಧಾನಸೌದ ಚಲೋ ಹೋರಾಟವನ್ನು ಹಮ್ಮಿಕೊಂಡಿದ್ದು, ಅಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಳವಳಿ ನಡೆಯಲಿದೆ ಎಂದರು.
ಪ್ರಮುಖ ಬೇಡಿಕೆಗಳೆಂದರೆ, ದೇಶದ ಸರ್ವೋಚ್ಛ ನ್ಯಾಯಾಲಯವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ (ನಿವೃತ್ತಿ ಉಪಧನ)ವನ್ನು1975ರಿಂದ ನೀಡುವುದರ ಕುರಿತು ಆದೇಶ ಮಾಡಿರುತ್ತದೆ. ಆದರೆ ಕರ್ನಾಟಕ ರಾಜ್ಯ ಸರ್ಕಾರವು 2023 ಏಪ್ರಿಲ್ 1ರಿಂದ ನಿವೃತ್ತಿ ಆದವರಿಗೆ ಗ್ರಾಚ್ಯುಟಿಯನ್ನು ನೀಡಲು ಹೊರಟಿದೆ. ಇಲ್ಲಿಯವರೆಗೆ ನಿವೃತ್ತರಾದ ಎಲ್ಲಾ ಕಾರ್ಯಕತೆಯರು ಮತ್ತು ಸಹಾಯಕಿಯರಿಗೆ ಯಾವುದೇ ಷರತ್ತು ಅಥವಾ ಸೀಲಿಂಗ್ ಇಲ್ಲದೇ ಗ್ರಾಚ್ಯುಟಿ ನೀಡಬೇಕು. ನೀಡಿದ ಗ್ಯಾರಂಟಿ ಗೌರವಧನದಲ್ಲಿ ಹೆಚ್ಚಳ ಆಗಬೇಕು.ಗೌರವ ಧನವನ್ನು ಕಾರ್ಯಕರ್ತೆಯರಿಗೆ ಮಾಸಿಕ 15000 ಹಾಗೂ ಸಹಾಯಕಿಯರಿಗೆ ಮಾಸಿಕ 10000ಕ್ಕೆ ಏರಿಸಬೇಕು ಎಂದರು. ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿಯನ್ನು ಆರಂಭಿಸಬೇಕು. ಇದಕ್ಕೆ ರಾಜ್ಯ ಸರ್ಕಾರವು ತಾತ್ವಿಕ ಒಪ್ಪಿಗೆಯನ್ನು ನೀಡಿರುತ್ತದೆ. ಇದರ ಕುರಿತು ತಜ್ಞರ ಸಮಿತಿಯನ್ನು ಕೂಡಲೇ ರಚಿಸಬೇಕು. ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿಗಳನ್ನು ಈ ನಿಟ್ಟಿನಲ್ಲಿ ಆರಂಭಿಸಬೇಕು ಎಂದರು.
ರಾಜ್ಯದಲ್ಲಿ ಅಂಗನವಾಡಿಗಳಿಗೆ ಕಳಪೆ ಗುಣಮಟ್ಟದ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿದೆ. ಈ ರೀತಿಯ ಕಳಪೆ ಗುಣಮಟ್ಟದ ಆಹಾರ ಸರಬರಾಜಿಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಮತ್ತು ಕೆಲವು ಅಧಿಕಾರಿಗಳು ಶಾಮೀಲಾಗಿರುವ ಆರೋಪಗಳು ಕೇಳಿ ಬರುತ್ತಿವೆ. ಈ ವ್ಯವಸ್ಥೆಯನ್ನು ಬದಲಿಸಿ ಈ ಹಿಂದೆ ಇದ್ದಂತೆಯೇ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಆಹಾರ ಸರಬರಾಜು ಸಮಿತಿಯನ್ನು ಪುನರ್ ಸ್ಥಾಪಿಸುವ ಮೂಲಕ ಆಹಾರದ ಗುಣಮಟ್ಟವನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.ನೇಮಕಾತಿ ವಯೋಮಿತಿಯನ್ನು ಸಡಿಲಿಸಿ ಎಸ್.ಸಿ, ಎಸ್.ಟಿ. ಅಭ್ಯರ್ಥಿಗಳಿಗೆ 40 ವರ್ಷ ಹಾಗೂ ಸಾಮಾನ್ಯ ವರ್ಗದವರಿಗೆ 38 ವರ್ಷ ಎಂದು ನೇಮಕಾತಿ ವಯೋಮಿತಿಯಲ್ಲಿ ಬದಲಾವಣೆಯನ್ನು ತರಬೇಕು ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ರಾಜ್ಯ ಸರ್ಕಾರವು ಕೂಡಲೇ ಸರಿಪಡಿಸಿ ಬಗೆಹರಿಸಬೇಕೆಂದು ಸಂಯುಕ್ತ ಸಂಘರ್ಷ ಸಮಿತಿಯು ವಿಧಾನಸೌಧ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಜಿಲ್ಲಾಧ್ಯಕ್ಷೆ ಎಸ್.ಎನ್. ಜಯಲಕ್ಷ್ಮಿ, ಕಾರ್ಯಾಧ್ಯಕ್ಷೆ ಕೆ. ನೇತ್ರಾವತಿ ಇತರರು ಉಪಸ್ಥಿತರಿದ್ದರು.