ನಾಡಿನ ಶಕ್ತಿಸೌಧ ವಿಧಾನಸೌಧ ಟೂರ್‌ : ಮೊದಲ ದಿನ ನೀರಸ

KannadaprabhaNewsNetwork |  
Published : Jun 01, 2025, 11:53 PM ISTUpdated : Jun 02, 2025, 08:20 AM IST
vidhana soudha 1 | Kannada Prabha

ಸಾರಾಂಶ

ಜನಸಾಮಾನ್ಯರಿಗೂ ನಾಡಿನ ಶಕ್ತಿಸೌಧ ವೀಕ್ಷಣೆ ಅವಕಾಶ ಸಿಗಲೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ ಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

 ಬೆಂಗಳೂರು : ಜನಸಾಮಾನ್ಯರಿಗೂ ನಾಡಿನ ಶಕ್ತಿಸೌಧ ವೀಕ್ಷಣೆ ಅವಕಾಶ ಸಿಗಲೆಂದು ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ವಿಧಾನಸೌಧ ಮಾರ್ಗದರ್ಶಿ ಪ್ರವಾಸ’ ಕ್ಕೆ ಭಾನುವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಆದರೆ ಮೊದಲ ದಿನ ಕೇವಲ 102 ಮಂದಿ ಮಾತ್ರ ವಿಧಾನಸೌಧ ವೀಕ್ಷಣೆ ಮಾಡಿದ್ದು, ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಧಾನಸೌಧ ಪ್ರವಾಸಕ್ಕೆ ನೋಂದಾಯಿಸಿಕೊಂಡಿದ್ದವರಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಲಾ 25ರಿಂದ 30 ಮಂದಿಯ ನಾಲ್ಕು ಬ್ಯಾಚ್‌ ಮಾಡಿ ಬೆಳಗ್ಗೆಯಿಂದಲೇ ವೀಕ್ಷಣೆಗೆ ಅವಕಾಶ ನೀಡಿತು. ಪ್ರತಿ ಬ್ಯಾಚ್‌ಗೂ ಒಬ್ಬ ಗೈಡ್‌ ಅನ್ನು ನಿಯೋಜಿಸಲಾಗಿತ್ತು. ಸಭಾಧ್ಯಕ್ಷರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜ್ಞಾನಶೇಖರ್‌ ಸೇರಿ ವಿಧಾನಸೌಧವನ್ನು ಚೆನ್ನಾಗಿ ಬಲ್ಲ ಸಿಬ್ಬಂದಿಯನ್ನೇ ಗೈಡ್‌ಗಳಾಗಿ ನಿಯೋಜಿಸಲಾಗಿದೆ. ನಾಲ್ವರು ಗೈಡ್‌ಗಳು ಸಾರ್ವಜನಿಕರಿಗೆ ವಿಧಾನಸೌಧದ ಇತಿಹಾಸ, ಪರಂಪರೆಯ ಮಾಹಿತಿ ನೀಡಲು ಹಾಗೂ ಶಕ್ತಿಸೌಧದ ಆವರಣದಲ್ಲಿರುವ ಹಲವು ಮಹನೀಯರ ಪುತ್ಥಳಿಗಳಿಂದ ಹಿಡಿದು ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣದವರೆಗೆ ಎಲ್ಲಾ ಪ್ರಮುಖ ಸ್ಥಳಗಳನ್ನೂ ತೋರಿಸಿ ಮಾಹಿತಿ ಒದಗಿಸಿದರು. ಸರ್ಕಾರ ವಿಧಾನಸೌಧ ವೀಕ್ಷಣೆಗೆ ಕಾರ್ಯಕ್ರಮ ರೂಪಿಸಿ ಅವಕಾಶ ಮಾಡಿಕೊಟ್ಟಿದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ನೋಂದಾಯಿಸಿದ್ದು 120 ಜನ, ಬಂದಿದ್ದು 102 ಮಂದಿ:

ಪ್ರತಿ ತಿಂಗಳ ಎಲ್ಲಾ ಭಾನುವಾರ ಮತ್ತು ಎರಡು ಮತ್ತು ನಾಲ್ಕನೇ ಶನಿವಾರ ವಿಧಾನಸೌಧವನ್ನು ಪ್ರವಾಸಿ ತಾಣವಾಗಿ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಜೂ.1ರಿಂದ ಇದು ಜಾರಿಗೆ ಬಂದಿದ್ದು, ಮೊದಲ ದಿನ ರಾಜ್ಯದ ಆಡಳಿತ ಸೌಧ ವೀಕ್ಷಣೆಗೆ 67 ಮಂದಿ ಪುರುಷರು ಮತ್ತು 53 ಮಂದಿ ಮಹಿಳೆಯರು ಸೇರಿ ಒಟ್ಟು 120 ಮಂದಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವೆಬ್‌ಸೈಟ್‌ ಮೂಲಕ ನೋಂದಣಿ ಮಾಡಿಕೊಂಡಿದ್ದರು. ಆದರೆ, ಅಂತಿಮವಾಗಿ 102 ಮಂದಿ ಹಾಜರಾಗಿ ವಿಧಾನಸೌಧ ವೀಕ್ಷಿಸಿದರು ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 ಹೀಗಿತ್ತು ವಿಧಾನಸೌಧ ಪ್ರವಾಸ?

ವಿಧಾನಸೌಧ ಭದ್ರತಾ ಸಿಬ್ಬಂದಿ ವಿಕಾಸಸೌಧ ಪ್ರವೇಶದ್ವಾರದಲ್ಲಿ (ಗೇಟ್‌ ನಂ.3) ಸಾರ್ವಜನಿರನ್ನು ತಪಾಸಣೆ ನಡೆಸಿ, ಅಧಿಕೃತ ಗುರುತಿನ ಚೀಟಿ ಪರಿಶೀಲಿಸಿ ಒಳಬಿಟ್ಟರು. ಈ ವೇಳೆ ಗೈಡ್‌ಗಳು ಜೊತೆಗಿದ್ದು ಗೇಟ್‌ನಿಂದ ಒಳಗೆ ಕರೆದೊಯ್ದರು. ವಿಧಾನಸೌಧಕ್ಕೆ ಅಡಿಗಲ್ಲು ಹಾಕಿದ್ದು ಯಾವಾಗ, ಯಾರು, ಕಟ್ಟಡದ ಭವ್ಯತೆ, ಪರಂಪರೆ, ಇತಿಹಾಸ, ಶೈಲಿ ಬಗ್ಗೆ ಮಾಹಿತಿಯನ್ನು ಗೈಡ್‌ಗಳು ಕನ್ನಡ ಮತ್ತು ಇಂಗ್ಲೀಷ್‌ ಭಾಷೆಯಲ್ಲಿ ವಿವರಿಸಿದರು. ನಂತರ ವಿಧಾನಸೌಧ ಆವರಣದಲ್ಲಿರುವ ಗಾಂಧೀಜಿ, ಅಂಬೇಡ್ಕರ್‌, ನೆಹರು, ಬಸವಣ್ಣ, ನಾಡಪ್ರಭು ಕೆಂಪೇಗೌಡ, ತಾಯಿ ಭುವನೇಶ್ವರಿ ಪ್ರತಿಮೆ ಸೇರಿ ಎಲ್ಲ ಪ್ರತಿಮೆಗಳ ವೀಕ್ಷಣೆ. ನಂತರ ಕಾರಿಡಾರ್‌ಗಳಲ್ಲಿ ವಾಕ್‌, ಮುಖ್ಯಮಂತ್ರಿಗಳು, ಸ್ಪೀಕರ್‌, ಸಭಾಪತಿ, ಸಚಿವರ ಕೊಠಡಿಗಳು, ಸಂಪುಟ ಸಭೆ ಕೊಠಡಿ, ವಿಧಾನಸಭೆ, ವಿಧಾನ ಪರಿಷತ್‌ ಸಭಾಂಗಣ ಹೀಗೆ ಇಡೀ ಶಕ್ತಿಸೌಧ ವೀಕ್ಷಣೆಗೆ ಅವಕಾಶ ನೀಡಿ ಮಾಹಿತಿ ನೀಡಿದರು.

ಸಾರ್ವಜನಿಕರ ಹರ್ಷ:

ಸರ್ಕಾರ ವಿಧಾನಸೌಧ ವೀಕ್ಷಣೆಗೆ ಕಾರ್ಯಕ್ರಮ ರೂಪಿಸಿ ಅವಕಾಶ ಮಾಡಿಕೊಟ್ಟಿದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇಷ್ಟು ದಿನ ವಿಧಾನಸೌಧದ ಹೊರಗಡೆ ನಿಂತು ಫೋಟೋ, ಸೆಲ್ಫಿ ತೆಗೆದುಕೊಂಡು ಹೋಗುತ್ತಿದ್ದೆವು. ಇವತ್ತು ಒಳಗಡೆ ಬಂದು ಶಕ್ತಿಸೌಧದ ಮೂಲೆಮೂಲೆಯನ್ನೂ ನೋಡ್ತಿದ್ವಿ. ಒಳಗೂ ಫೋಟೋ, ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಿದ್ದರು. ವಿಧಾನಸೌಧ ಕಟ್ಟಡ ಹೊರಗೆ ಕಾಣುವುದಕ್ಕಿಂತ ಒಳಗಡೆ ನೋಡಲು ಹೆಚ್ಚು ಅದ್ಭುತವಾಗಿದೆ. ಮುಖ್ಯಮಂತ್ರಿಗಳ ಕಚೇರಿ, ಅಧಿವೇಶನ ನಡೆಯುವ ವಿಧಾನಸಭೆ, ವಿಧಾನಪರಿಷತ್‌ ಸಭಾಂಗಣಗಳನ್ನು ಬರೀ ಟೀವಿಯಲ್ಲಿ ನೋಡುತ್ತಿದ್ದೆವು. ಈಗ ಖುದ್ದು ಅದರೊಳಗೆ ಕಾಲಿರಿಸಿ ನೋಡಿದ್ದು ಅತ್ಯಂತ ಖುಷಿಯಾಯಿತು ಎಂದು ಸಾರ್ವಜನಿಕರು ಹೇಳಿದರು.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ