ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
೩೧ ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ ೨೪ ಬಿಜೆಪಿ, ೫ ಕಾಂಗ್ರೆಸ್ ಹಾಗೂ ೨ ಪಕ್ಷೇತರರನ್ನು ಹೊಂದಿದೆ. ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ೨೨, ಸಂಸದ, ಶಾಸಕರು ಸೇರಿ ೨೪ರ ಹಾಜರಾತಿಯಿತ್ತು.
ಉಳಿದ ಬಿಜೆಪಿಯಿಂದ ಚುನಾಯಿತಗೊಂಡಿದ್ದ ವಾರ್ಡ್ ನಂ.೧ ಸದಸ್ಯೆ ಸಾವಿತ್ರಿ ಶೇಖರ ಹಕ್ಕಲದಡ್ಡಿ ಹಾಗೂ ವಾರ್ಡ್ ನಂ.೨೩ ರ ಸದಸ್ಯ ವಿಶ್ವನಾಥ ಸವದಿಯವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಉಳಿದಂತೆ ಕಾಂಗ್ರೆಸ್‌ನ ಐವರು ಸದಸ್ಯರೂ ಗೈರು ಹಾಜರಿ ಕಂಡಿದ್ದರು.ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿಯಾಗಿದ್ದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದರು.
ಶನಿವಾರ ಬೆಳಿಗಿನ ಜಾವದವರೆಗೂ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿ ಐವರಲ್ಲಿ ತೀವ್ರ ಪೈಪೋಟಿ ಎದುರಾಗಿತ್ತು. ಇದರಲ್ಲಿ ನಾಲ್ವರೂ ಒಂದೇ ಸಮುದಾಯದವರಾಗಿರುವುದು ಆಯ್ಕೆಯು ತೀವ್ರ ತಲೆನೋವುಂಟಾಗಿತ್ತು. ಕೊನೆಗೂ ವಿದ್ಯಾ ಪ್ರವೀಣ ದಭಾಡಿ ಆಯ್ಕೆಯಾದರು.
ಪ್ರಥಮ ಬಾರಿಗೆ ನಗರಸಭೆ ಪ್ರವೇಶ ಪಡೆದ ವಾರ್ಡ್ ನಂ.೨ ರ ಸದಸ್ಯೆ ವಿದ್ಯಾ ಪ್ರವೀಣ ದಭಾಡಿ ಈ ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಈ ಬಾರಿ ಮತ್ತೆ ಅಧ್ಯಕ್ಷ ಗದ್ದುಗೆ ಅಲಂಕರಿಸಿರುವುದು ವಿಶೇಷ.