ಈ ನೆಲದ ಚರಿತ್ರೆ ತಿಳಿದಿದ್ದರೆ ಮಾತ್ರ ಅಕ್ಕಮಹಾದೇವಿಯನ್ನು ಅರ್ಥ ಮಾಡಿಕೊಳ್ಳಬಹುದು

KannadaprabhaNewsNetwork |  
Published : Mar 13, 2025, 12:49 AM IST
9 | Kannada Prabha

ಸಾರಾಂಶ

ಕಾವ್ಯ ಎಂದರೆ ಅದು ನನ್ನ ಅಭಿವ್ಯಕ್ತಿ. ಇಂದಿನ ಸ್ತ್ರೀವಾದದ ಸಂದರ್ಭದಲ್ಲಿ ಅಕ್ಕಮಹಾದೇವಿಯನ್ನು ನೆನೆಯುವುದು ಅನಿವಾರ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಈ ನೆಲದ ಚರಿತ್ರೆಯನ್ನು ತಿಳಿದಿದ್ದರೇ ಮಾತ್ರ ಅಕ್ಕಮಹಾದೇವಿಯನ್ನು ಅರ್ಥ ಮಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಅಕ್ಕ ಮಹಾದೇವಿ ಸಂಶೋಧನಾ ಪೀಠದ ನಿರ್ದೇಶಕಿ ಡಾ. ಕವಿತಾ ರೈ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರವು ಮಂಗಳವಾರ ಆಯೋಜಿಸಿದ್ದ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಅವರು ಅಕ್ಕಮಹಾದೇವಿ ವಚನಗಳಲ್ಲಿನ ಚಿಂತನೆ ಕುರಿತು ಮಾತನಾಡಿದರು.

ಕಾವ್ಯ ಎಂದರೆ ಅದು ನನ್ನ ಅಭಿವ್ಯಕ್ತಿ. ಇಂದಿನ ಸ್ತ್ರೀವಾದದ ಸಂದರ್ಭದಲ್ಲಿ ಅಕ್ಕಮಹಾದೇವಿಯನ್ನು ನೆನೆಯುವುದು ಅನಿವಾರ್ಯವಾಗಿದೆ. ಅಂದು ಮಹಾಮನೆಯಲ್ಲಿ 2 ಲಕ್ಷಕ್ಕೂ ಅಧಿಕ ಜನರಿಗೆ ದಾಸೋಹ ನಡೆಯುತ್ತಿತ್ತೆಂದು ಚನ್ನಬಸವಣ್ಣ ದಾಖಲಿಸುತ್ತಾನೆ ಎಂದರು.

ಅಕ್ಕನ ವಚನಗಳಲ್ಲಿ ಹೆಣ್ಣನ್ನು ಸಂಪತ್ತನ್ನಾಗಿ ನೋಡುವುದನ್ನು ವಿರೋಧಿಸಲಾಗಿದೆ. ಕೌಶಿಕನನ್ನು ತೊರೆದು ಮಲ್ಲಿಕಾರ್ಜುನನನ್ನೇ ತನ್ನ ಗಂಡನೆಂದು ಬಗೆದು ಕಾವ್ಯಾತ್ಮಕವಾದ ವಚನಗಳನ್ನು ರಚಿಸಿದವಳು ಮಹಾದೇವಿ ಅಕ್ಕ. ಇದುವರೆವಿಗೂ ನಮಗೆ 645 ಅಕ್ಕನ ವಚನಗಳು ದೊರೆತಿವೆ. ಅಕ್ಕನ ವಚನಗಳಲ್ಲಿ ಸಮಾನತೆಯನ್ನು ನಾವು ಕಾಣಬಹುದು. ಬದುಕಿನಲ್ಲಿ ಬೆಂದು ಬಂದವಳು ಅಕ್ಕ ಮಹಾದೇವಿ. ಮಹಾದೇವಿಯನ್ನು ಅಕ್ಕ ಎಂದು ಕರೆದವನೇ ನಮ್ಮ ಬಸವಣ್ಣ ಎಂದು ಅವರು ಹೇಳಿದರು.

ಸಾರ್ವತ್ರಿಕ ಅಭಿವ್ಯಕ್ತಿಯನ್ನು ರೂಪಿಸಿದ ಸಂದರ್ಭವೇನಾದರೂ ಇದ್ದರೇ ಅದು ವಚನ ಕಾಲಘಟ್ಟ. ಈ ಸಮಾಜಕ್ಕೆ ಕಾಯಕಲ್ಪ ನೀಡಿದ್ದು ಬಸವಣ್ಣನವರ ಮಹಾಮನೆ ಅನುಭವ ಮಂಟಪ ಎಂದರು.

ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ, ಸಂಶೋಧನೆ, ಅಧ್ಯಯನ ಹಾಗೂ ವಿಸ್ತರಣಾ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ. ಅರವಿಂದ ಮಾಲಗತ್ತಿ ಮಾತನಾಡಿ, ಸತ್ಯ ನುಡಿಯುವುದೇ ಶರಣರ ಆಲೋಚನೆಯಾಗಿತ್ತು. ಶರಣರು ಸಮಾಜದಲ್ಲಿ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ದುಡಿದಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ಅಂದು ನಮ್ಮ ಮನೆಗಳಲ್ಲೂ ಅಕ್ಕ ಮಹಾದೇವಿ, ನೀಲಾಂಬಿಕೆ, ಗಂಗಾಂಬಿಕೆ ಮುಂತಾದವರ ಚಿತ್ರಪಟಗಳನ್ನು ಪೂಜಿಸಲಾಗುತ್ತಿತ್ತು. ನಮಗೆ ಈಗ ಅದರ ಮಹತ್ವ ತಿಳಿದು ಬರುತ್ತಿದೆ. ನಾನು ಕೂಡ ಅಕ್ಕನ ವಚನಗಳನ್ನು ಕೇಳಿದ್ದು, ಅಕ್ಕನ ಕ್ರಾಂತಿಕಾರಿಯ, ಹೆಣ್ಣು ಗಂಡುಗಳ ಬೇಧ ಭಾವವನ್ನು ವಿರೋಧಿಸುವ ಭಾವವಿರುವುದನ್ನು ಕಂಡಿದ್ದೇನೆ. ವಚನಗಳು ಇಂದಿಗೂ ಎಲ್ಲರಿಗೂ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು.

ಸರಣಿ ಉಪನ್ಯಾಸಗಳ ಸಂಚಾಲಕ ಡಾ. ಮೈಲಹಳ್ಳಿ ರೇವಣ್ಣ, ಕಾಲೇಜಿನ ಅಧ್ಯಾಪಕ ಸಲಹೆಗಾರ ಡಾ.ಪಿ.ಕೆ. ಗೋವರ್ಧನ್ ಇದ್ದರು. ಜೆ. ಮಂಜು ಸ್ವಾಗತಿಸಿದರು. ಹೇಮಾ ವಂದಿಸಿದರು. ಡಾ. ಶ್ರೀನಿವಾಸ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''