ವಿದ್ಯಾರ್ಥಿಗಳು ಅತ್ಯುನ್ನತ ಗುರಿಗಳಿಂದ ಉತ್ತಮ ಮಾನವರಾಗಿ ರೂಪುಗೊಳ್ಳಬಹುದು

KannadaprabhaNewsNetwork | Published : Mar 3, 2025 1:47 AM

ಸಾರಾಂಶ

ವಿದ್ಯಾರ್ಥಿಗಳು ಯಾವಾಗಲೂ ಸಕಾರಾತ್ಮಕ ಯೋಚನೆಗಳು, ಸಕಾರಾತ್ಮಕ ವಿಚಾರಗಳು ಮತ್ತು ಸಕಾರಾತ್ಮಕ ಜನಗಳ ನಡುವೆ ಬೆರೆಯಬೇಕು

ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿಗಳು ಅತ್ಯುನ್ನತವಾದ ಗುರಿಗಳನ್ನು ತಮ್ಮ ಜೀವನದಲ್ಲಿ ಇರಿಸಿಕೊಳ್ಳಬೇಕು. ಆಗ ಮಾತ್ರ ಉತ್ತಮ ಮಾನವರಾಗಿ ರೂಪುಗೊಳ್ಳಬಹುದು ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಕೆ. ಮಂಟೇಲಿಂಗು ತಿಳಿಸಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ್ದ ರಾಜ್ಯ ಮಟ್ಟದ ಅಂತರ ಕಾಲೇಜುಗಳ ಬಿಝಟೆಕ್ ಎಕ್ಸ್ಟ್ರಾ ವೆಗಾನ್ಝಾ- ವಿದ್ವತ್- 2025 ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವಾಗಲೂ ಸಕಾರಾತ್ಮಕ ಯೋಚನೆಗಳು, ಸಕಾರಾತ್ಮಕ ವಿಚಾರಗಳು ಮತ್ತು ಸಕಾರಾತ್ಮಕ ಜನಗಳ ನಡುವೆ ಬೆರೆಯಬೇಕು ಎಂದರು.ವಿದ್ಯಾರ್ಥಿಗಳು ವೈಯಕ್ತಿಕ ಕೌಶಲ್ಯ, ಸಾಮಾಜಿಕ ಕೌಶಲ್ಯ ಹಾಗೂ ನಿರ್ವಹಣಾ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಹಾಗೆಯೇ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಇವು ಬದುಕಿನಲ್ಲಿ ಸ್ಪರ್ಧೆಗಳನ್ನು ಎದುರಿಸಲು ಹಾಗೂ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತವೆ ಎಂದು ಅವರು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಮಾತನಾಡಿ, ನಾವು ಹಣದಿಂದ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ತಾಳ್ಮೆ ಮತ್ತು ಸಂಯಮಗಳಿಂದ ಅದನ್ನು ಪಡೆಯಬಹುದು. ಹಸಿವನ್ನು ಗೆಲ್ಲಲು ಮನುಷ್ಯನಿಗೆ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಹೆಚ್ಚಿನದನ್ನು ಕಲಿಯುವುದರ ಕಡೆಗೆ ಸದಾ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ನಿರ್ವಹಣಾ ಮಂಡಳಿಯ ಅಧ್ಯಕ್ಷ ಟಿ. ನಾಗರಾಜು ಮಾತನಾಡಿ, ವಿದ್ಯಾರ್ಥಿಯಾದವನು ಏನನ್ನಾದರೂ ಸಾಧಿಸಬೇಕಾದರೇ ಗುರಿಯನ್ನು ಇಟ್ಟುಕೊಳ್ಳಬೇಕು. ಎಲ್ಲರನ್ನು ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಗುರು ಹಿರಿಯರಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಈ ಗುಣಗಳನ್ನು ಬೆಳೆಸಿಕೊಂಡಾಗ ಸಾಧನೆಯ ಶಿಖರವನ್ನು ಏರಬಹುದು ಎಂದು ಹೇಳಿದರು. ಮೈಕಾ ಕಾಲೇಜು ಚಾಂಪಿಯನ್ಎರಡು ದಿನಗಳ ಕಾರ್ಯಕ್ರಮದಲ್ಲಿ ಒಟ್ಟಾರೆ 17 ವಿಭಾಗಳಲ್ಲಿ ನಡೆದ ಎಲ್ಲಾ ಸ್ಫರ್ಧೆಗಳಲ್ಲಿ ರಾಜ್ಯದ ವಿವಧ ಜಿಲ್ಲೆಗಳ ಒಟ್ಟು 105 ತಂಡಗಳು ಭಾಗವಹಿಸಿದ್ದವು. ಪ್ರಧಾನ ಸ್ಪರ್ಧೆಗಳಲ್ಲಿ 22 ತಂಡಗಳು, ಅನುಸಾಂಘಿಕ ಸ್ಪರ್ಧೆಗಳಲ್ಲಿ 43 ತಂಡಗಳು, ಕ್ರೀಡಾ ಸ್ಪರ್ಧೆಗಳಲ್ಲಿ 33 ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ 7 ತಂಡಗಳಿಂದ 500 ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿಜೇತರಾದ ಎಲ್ಲಾ ವಿಭಾಗಗಳ ಸ್ಪರ್ಧಾರ್ಥಿಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು.ಒಟ್ಟಾರೆ ಸಮಗ್ರ ಚಾಂಪಿಯನ್‌ ಶಿಪ್ ವಿಜೇತರಾದ ಮೈಸೂರಿನ ಮೈಕಾ ಕಾಲೇಜಿನ ವಿದ್ಯಾರ್ಥಿಗಳಿಗೆ 15000 ರೂ. ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.ವಿದ್ವತ್ ಸಂಚಾಲಕಿ ಎನ್. ಗೀತಾ, ಅಧ್ಯಾಪಕ ಸಂಚಾಲಕರಾದ ಎಂ.ಟಿ. ಶ್ರುತಿ, ವಿ. ಚಂದನ್ ಇದ್ದರು. ಅನು ಪ್ರಾರ್ಥಿಸಿದರು. ಗಾನವಿ ನಿರೂಪಿಸಿದರು. ರಿತುಶ್ರೀ ಸ್ವಾಗತಿಸಿದರು. ಶ್ರೇಯಸ್ ಸ್ಟ್ಯಾನ್ಲಿ ವಂದಿಸಿದರು.

Share this article