ವೀಕ್ಷಕರಿಂದ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಆಕಾಂಕ್ಷಿತರ ಅಭಿಪ್ರಾಯ ಸಂಗ್ರಹ

KannadaprabhaNewsNetwork |  
Published : Jul 09, 2025, 12:19 AM IST
8ಕೆಆರ್ ಎಂಎನ್ 2.ಜೆಪಿಜಿರಾಮನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ವೀಕ್ಷಕರು ಆಕಾಂಕ್ಷಿತರು, ಪ್ರಮುಖ ಮುಖಂಡರು ಹಾಗೂ ಬ್ಲಾಕ್ ಅಧ್ಯಕ್ಷರ ಸಭೆ ನಡೆಸಿದರು. | Kannada Prabha

ಸಾರಾಂಶ

ಮಾಜಿ ಶಾಸಕರಾದ ಬಿ.ಶಿವರಾಂ, ಹನೂರು ನರೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಪ್ರಮುಖ ಮುಖಂಡರು, ಬ್ಲಾಕ್ ಅಧ್ಯಕ್ಷರ ಸಭೆ ನಡೆಸಿ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಆಯ್ಕೆ ಸಂಬಂಧ ಕೆಪಿಸಿಸಿಯಿಂದ ನಿಯೋಜನೆಗೊಂಡ ವೀಕ್ಷಕರು ಆಕಾಂಕ್ಷಿತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ವೀಕ್ಷಕರಾಗಿ ಆಗಮಿಸಿದ್ದ ಮಾಜಿ ಶಾಸಕರಾದ ಬಿ.ಶಿವರಾಂ, ಹನೂರು ನರೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡರವರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಜಿಲ್ಲೆಯ ಪ್ರಮುಖ ಮುಖಂಡರು, ಬ್ಲಾಕ್ ಅಧ್ಯಕ್ಷರ ಸಭೆ ನಡೆಸಿ ಹೊಸ ಜಿಲ್ಲಾಧ್ಯಕ್ಷರ ಆಯ್ಕೆ ಸಂಬಂಧ ಚರ್ಚೆ ನಡೆಸಿದರು.

ಈ ವೇಳೆ ವೀಕ್ಷಕರಾದ ಮಾಜಿ ಶಾಸಕ ಶಿವರಾಂ ಮಾತನಾಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಅಧ್ಯಕ್ಷರ ನೇಮಕ ಮಾಡುವ ಸಂಬಂಧ ನಮ್ಮನ್ನು ವೀಕ್ಷಕರಾಗಿ ಕೆಪಿಸಿಸಿ ನೇಮಿಸಿದೆ. ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿತರು ಮುಕ್ತವಾಗಿ ಅಥವಾ ಆಂತರಿಕವಾಗಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಬಹುದಾಗಿದೆ. ಅದಕ್ಕೂ ಮುನ್ನಾ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹೆಸರು ಪ್ರಸ್ತಾಪಿಸುವವರು ಜಿಲ್ಲೆಯಾಧ್ಯಂತ ಪಕ್ಷವನ್ನು ಸಂಘಟಿಸುವ ಇಚ್ಛಾಶಕ್ತಿ ಮತ್ತು ಬದ್ದತೆಯಿಟ್ಟು ಕೊಂಡಿರುವವರು ಸ್ವ-ಇಚ್ಚೆಯಿಂದ ತಮ್ಮ ಹೆಸರನ್ನು ಹೇಳಬಹುದು ಎಂದು ಸಲಹೆ ನೀಡಿದರು.

ರಾಮನಗರ ಕ್ಷೇತ್ರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಲು ದೂರ ದೃಷ್ಟಿಯಿಟ್ಟುಕೊಂಡು ವೀಕ್ಷಕರು ಆಗಮಿಸಿದ್ದು, ಆಕಾಂಕ್ಷಿಗಳು ತಮ್ಮ ಇಂಗಿತ ವ್ಯಕ್ತಪಡಿಸಿದ್ದೀರಿ. ವರಿಷ್ಠರು ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದು, ಅವರು ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಹಗಲಿರುಳು ಶ್ರಮಿಸಬೇಕಾಗುತ್ತದೆ ಎಂದು ಹೇಳಿದರು.

ವೀಕ್ಷಕ ಮಾಜಿ ಶಾಸಕ ಹನೂರು ನರೇಂದ್ರ ಮಾತನಾಡಿ, ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದ ಗಂಗಾಧರ್ ಅವರು 8 ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮುಂದೆ ಜಿಲ್ಲಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವವರು ಶಾಸಕರು ಮತ್ತು ಬ್ಲಾಕ್ ಅಧ್ಯಕ್ಷರೊಂದಿಗೆ ಸಾಮರಸ್ಯದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಜವಬ್ದಾರಿಗಳು ಇರುತ್ತವೆ. ಆಕಾಂಕ್ಷಿತರ ಹೆಸರನ್ನು ವರಿಷ್ಟರಿಗೆ ತಿಳಿಸುವ ಜೊತೆಗೆ ನಾಲ್ವರು ಶಾಸಕರ ಜೊತೆ ಮಾಜಿ ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಮ್ಮತದಿಂದ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅಣತಿಯಂತೆ ಜನರಿಗೆ ತಲುಪಿಸುವಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಶ್ರಮಿಸಿವೆ. ಪಕ್ಷದ ಸಂಘಟನೆ ಯನ್ನು ಸದೃಡಗೊಳಿಸುವ ಮನಸ್ಸುಳ್ಳವರು ಮಾತ್ರ ಜಿಲ್ಲಾಧ್ಯಕ್ಷ ಸ್ಥಾನವನ್ನು ಪಡೆಯಬೇಕಾಗುತ್ತದೆ ಎಂದರು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಗಂಗಾಧರ್, ಮಾಜಿ ಶಾಸಕರಾದ ಸಿಎಂ.ಲಿಂಗಪ್ಪ, ಅಶ್ವಥ್, ಕೆ.ರಾಜು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಮುಖಂಡರಾದ ಎಚ್ .ಕೆ.ಶ್ರೀಕಂಠು, ಹಾರೋಹಳ್ಳಿ ಅಶೋಕ್ , ವಿ.ಎಚ್.ರಾಜು, ಹನೂರು ರಾಜಣ್ಣ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

...ಬಾಕ್ಸ್ ...

ಜಿಲ್ಲಾಧ್ಯಕ್ಷ ಸ್ಥಾನಕ್ಕೆ 8 ಮಂದಿ ಆಕಾಂಕ್ಷಿಗಳು :

ಜಿಲ್ಲಾಧ್ಯಕ್ಷ ಸ್ಥಾನ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ನೀಡುವಂತೆ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟರಾಜು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ಪುಟ್ಟರಾಜು, ಸಿಎನ್ಆರ್ ವೆಂಕಟೇಶ್, ಜಯ ಕರ್ನಾಟಕ ರವಿ, ಚನ್ನಪಟ್ಟಣದ ಮಲವೇಗೌಡ, ಹಾರೋಹಳ್ಳಿ ಜಗದೀಶ್ ಗೌಡ , ಹರೀಶ್ ಕುಮಾರ್ , ಸಾತನೂರು ನಾಗರಾಜು ವೀಕ್ಷಕರ ಮುಂದೆ ಹೆಸರುಗಳನ್ನು ವ್ಯಕ್ತಪಡಿಸಿದರು.

...ಬಾಕ್ಸ್ ...

ಸಭೆಗೆ ಶಾಸಕದ್ವಯರ ಗೈರು :

ಕೆಪಿಸಿಸಿಯಿಂದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹ ಸಭೆಗೆ ನಾಲ್ಕು ಕ್ಷೇತ್ರಗಳ ಶಾಸಕರಿಗೆ ಆಹ್ವಾನ ನೀಡಲಾಗಿತ್ತು. ಸಭೆಗೆ ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪೂರ್ವ ನಿಯೋಜಿತವಾಗಿ ಕೆಆರ್‌ಐಡಿಎಲ್ ಸಭೆಗೆ ಭಾಗವಹಿಸಬೇಕಿದೆ ಎಂದು ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಅವರಿಗೆ ಪತ್ರ ಬರೆದರೆ, ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್ ಸಭೆಗೆ ಗೈರಾಗಿದ್ದರು.

...ಕೋಟ್ ....

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎದುರಾಳಿಯಾಗಿರುವ ಜಾತ್ಯಾತೀತ ಜನತಾದಳ ಪಕ್ಷವನ್ನು ಸಮರ್ಥವಾಗಿ ಎದುರಿಸಲು ಮತ್ತು ಹೋರಾಟ ಹಮ್ಮಿಕೊಳ್ಳಲು ಯುವಕರಿಗೆ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಡಿ. ಇದರಿಂದ ಮುಂದೆ ಎದುರಾಗುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗಲಿದೆ.-ಕೆಂಪರಾಜು, ಮಾಜಿ ಉಪಾಧ್ಯಕ್ಷ, ರಾಜ್ಯ ಯುವ ಕಾಂಗ್ರೆಸ್ ಸಮಿತಿ.

8ಕೆಆರ್ ಎಂಎನ್ 2.ಜೆಪಿಜಿ

ರಾಮನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವೀಕ್ಷಕರು ಆಕಾಂಕ್ಷಿತರು, ಪ್ರಮುಖ ಮುಖಂಡರು ಹಾಗೂ ಬ್ಲಾಕ್ ಅಧ್ಯಕ್ಷರ ಸಭೆ ನಡೆಸಿದರು.

PREV