ಚಾಮರಾಜನಗರ: ಮಹಾಶಿವರಾತ್ರಿ ಪ್ರಯುಕ್ತ ಭಕ್ತರಿಂದ ಜಾಗರಣೆ, ಇಷ್ಟಲಿಂಗ ಪೂಜೆ ಹಾಗೂ ಮಠಗಳು ಹಾಗೂ ಶಿವದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು, ಪ್ರಸಾದ ವಿನಿಯೋಗ ನಡೆಯಿತು.
ಮಹಾಶಿವರಾತ್ರಿಯನ್ನು ಮಠ ದೇವಾಲಯಗಳಲ್ಲಿ ಅಲ್ಲದೆ ಮನೆಗಳಲ್ಲಿಯೂ ಆಚರಣೆ ಮಾಡಲಾಯಿತು, ಸಾಧ್ಯವಿರುವವರು ಉಪವಾಸ ವ್ರತ ಕೈಗೊಂಡರು, ಪ್ರಾತಃಕಾಲ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿ ಶುಭ್ರ ಶ್ವೇತ ವಸ್ತ್ರಧರಿಸಿ ಶಿವನ ಪೂಜೆಯಲ್ಲಿ ತೊಡಗಿದರು. ಶಿವಲಿಂಗಕ್ಕೆ ಹಾಲು, ಬಿಲ್ವಪತ್ರೆ, ಶ್ರೀಗಂಧ, ತುಪ್ಪ, ಸಕ್ಕರೆ ಮತ್ತು ಇತರ ವಸ್ತುಗಳನ್ನು ಅರ್ಪಿಸಿ ಪೂಜೆ ಮಾಡಿದರು.ಶಿವನ ದೇಗುಲಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು, ಮಹಾ ಮೃತ್ಯುಂಜಯ ಮಂತ್ರ ಹಾಗೂ ಶಿವ ತಾಂಡವ ಸ್ತೋತ್ರದಂತಹ ಮಂತ್ರಗಳನ್ನು ಅರ್ಚಕರು, ಪಠಿಸಿದರು, ಗ್ರಾಮೀಣ ಭಾಗದ ಶಿವ ದೇವಾಲಯಗಳು ಮತ್ತು ಮಠಗಳಲ್ಲಿ ಸಾಮೂಹಿಕ ಲಿಂಗ ಪೂಜೆ ನೆರವೇರಿತು.ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಹನೂರು, ಯಳಂದೂರು, ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಶಿವನ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬೆಳಗ್ಗೆಯಿಂದಲೇ ದೇವರಿಗೆ ವಿವಿಧ ಅಭಿಷೇಕ ಹಾಗೂ ವಿಶೇಷ ಪೂಜೆ ಮಾಡಲಾಯಿತು. ದೇವಸ್ಥಾನ ಹಾಗೂ ದೇವರ ಮೂರ್ತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು.ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ, ಯಡಬೆಟ್ಟ ಮಹದೇಶ್ವರ ದೇವಸ್ಥಾನ, ಎಣ್ಣೆಹೊಳೆ ಮಹದೇಶ್ವರ ದೇವಸ್ಥಾನ, ಮಂಗಲ ಬಳಿಯ ಶಂಕರೇಶ್ವರ ದೇವಸ್ಥಾನ, ಸಂತೇಮರಹಳ್ಳಿಯ ಮಹದೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳು ಭಕ್ತರಿಂದ ತುಂಬಿದ್ದವು, ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಗರದ ವಿರಕ್ತ ಮಠದ ಅವರಣದಲ್ಲಿ ಬುಧವಾರ ರಾತ್ರಿ ಜಾಗರಣೆ ಹಾಗೂ ಇಷ್ಟ ಲಿಂಗಪೂಜೆಯು ನೂರಾರು ಭಕ್ತರ ನಡುವೆ ನಡೆಯಿತು.ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿರುವ ಸಿದ್ದಬಸವರಾಜಸ್ವಾಮಿಗಳ ಗದ್ದುಗೆಗೆ ಚನ್ನಬಸವಸ್ವಾಮಿಗಳ ನೇತೃತ್ಬದಲ್ಲಿ ಗದ್ದುಗೆಗೆ ರುದ್ರಾಭಿಷೇಕ, ಬಿಲ್ಪಾರ್ಚನೆ, ಮಹಾಮಂಗಳಾರತಿ ನೆರವೇರಿಸಿದ ನಂತರ ಸೇರಿದ್ದ ಭಕ್ರ ಸಮೂಹಕ್ಕೆ ಇಷ್ಷಲಿಂಗ ಪೂಜೆ ನೆರವೇರಿಸಲಾಯಿತು. ಮಠದ ಅವರಣದಲ್ಲಿ ಬದನವಾಳು ಶಾಸ್ತ್ರೀ ಅವರ ಮಕ್ಕಳಿಂದ ರಾಜಶೇರ ವಿಲಾಸ ಶಿವಕಥೆ ಮತ್ತು ಭಕ್ತಿ ಗೀತೆಗಳ ಗಾಯನ ಇಡೀ ರಾತ್ರಿ ನಡೆಯಿತು.
ಭಜನಾ ತಂಡಗಳಿಂದ ಭಜನೆ ನಡೆಯಿತು. ಬಂದಿದ್ದ ಎಲ್ಲಾ ಭಕ್ತರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಯಿತು. ಚಾಮರಾಜನಗರ ತಾಲೂಕಿನ ಮರಿಯಾಲ ಮಠದಲ್ಲಿ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳ ನೇತೃದಲ್ಲಿ ಸಾಮೂಹಿಕ ಲಿಂಗ ಪೂಜೆ ನೆರವೇರಿಸಲಾಯಿತು, ಎಲ್ಲ ಭಕ್ತರಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು, ಭಜನಾ ತಂಡಗಳು ಭಜನೆ ಮಾಡಿ, ಜಾಗರಣೆ ಆಚರಿಸಲಾಯಿತು.