ಕೊಡಗು ಪತ್ರಕರ್ತರ ಸಂಘದಿಂದ ಅತ್ಯುತ್ತಮ ವರದಿಗಳಿಗೆ ವಿಘ್ನೇಶ್ ಭೂತನಕಾಡು ಸೇರಿ 6 ಮಂದಿಗೆ ಪ್ರಶಸ್ತಿ

KannadaprabhaNewsNetwork |  
Published : Mar 09, 2025, 01:46 AM ISTUpdated : Mar 09, 2025, 11:42 AM IST
ಚಿತ್ರ : ಅನಿಲ್  | Kannada Prabha

ಸಾರಾಂಶ

2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿವೆ. ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್‌ ಭೂತನಕಾಡು ಸೇರಿ 6 ಮಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 ಮಡಿಕೇರಿ : ಕೊಡಗು ಪತ್ರಕರ್ತರ ಸಂಘದಿಂದ ಅತ್ಯುತ್ತಮ ವರದಿಗಳಿಗೆ ನೀಡಲಾಗುವ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಕನ್ನಡಪ್ರಭ ಜಿಲ್ಲಾ ವರದಿಗಾರ ವಿಘ್ನೇಶ್ ಭೂತನಕಾಡು ಸೇರಿ ಆರು ಮಂದಿ ಪ್ರಶಸ್ತಿಗೆ ಭಾಜನಾಗಿದ್ದಾರೆ.

ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಕನ್ನಡ ಪ್ರಭದಲ್ಲಿ ಪ್ರಕಟಗೊಂಡ ವಿಘ್ನೇಶ್ ಭೂತನಕಾಡು ಅವರ ‘‘ಏಷ್ಯನ್ ಗೇಮ್ಸ್ ಗೆ ಪುಟ್ಟ ಜಿಲ್ಲೆ ಕೊಡಗಿನ ಕ್ರೀಡಾಪಟುಗಳು” ಎಂಬ ವರದಿಗೆ ದೊರೆತಿದೆ.

ಸಂಘದಿಂದ ನೀಡಲಾಗುವ ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ “ಪ್ರಜಾಪ್ರಭುತ್ವದ ದೇಗುಲದೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ದುಷ್ಕರ್ಮಿಗಳು” ಎಂಬ ವರದಿಗೆ ಅನಿಲ್ ಹೆಚ್.ಟಿ.ಪಡೆದುಕೊಂಡಿದ್ದಾರೆ. ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ “ಸೌಲಭ್ಯ ವಂಚಿತ ನಾಗರ ಹೊಳೆ ಆಶ್ರಮ ಶಾಲೆ” ಎಂಬ ವರದಿಗೆ ವಿನೋದ್ ಮೂಡಗದ್ದೆ ಭಾಜನರಾಗಿದ್ದಾರೆ. ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿ ಪ್ರಜಾವಾಣಿಯಲ್ಲಿ ಪ್ರಕಟಗೊಂಡ “ಏಲಕ್ಕಿ ಕೃಷಿಯಲ್ಲಿ ಯಶಸ್ಸು ಕಂಡ ದಂಪತಿ” ಎಂಬ ವರದಿಗೆ ಡಿ.ಪಿ.ಲೋಕೇಶ್ ಅವರಿಗೆ ಲಭಿಸಿದೆ. ಸಂಘದ ಸಲಹೆಗಾರರು ಹಾಗೂ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ.ಅನಂತಶಯನ ಅವರು ತಮ್ಮ ತಾಯಿ ಶ್ರೀಮತಿ ರಾಜಲಕ್ಷ್ಮಿ ಗೋಪಾಲಕೃಷ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟಗೊಂಡ ಉಷಾ ಪ್ರೀತಮ್ ಅವರ “ಆದಿವಾಸಿಗಳಿಗೆ ಬೇಕಿದೆ ಜಾಗೃತಿ ಬಾಲ್ಯವಿವಾಹ ತಂದಿಟ್ಟ ಸಂಕಷ್ಟ'''''''' ಎಂಬ ವರದಿ ಭಾಜನವಾಗಿದೆ.

ದೃಶ್ಯಮಾಧ್ಯಮ ವಿಭಾಗದಲ್ಲಿ ಮಾನವೀಯ ವರದಿ ಪ್ರಶಸ್ತಿ ಕೊಡಗು ಚಾನಲ್ ನ ಟಿ.ಜೆ.ಪ್ರವೀಣ್ ಅವರ “ಕಾಡಂಚಿನಿಂದ ನಾಡಿಗೆ ಬಂದವರ ಶೋಚನೀಯ ಸ್ಥಿತಿ” ಎಂಬ ವರದಿಗೆ ಲಭಿಸಿದೆ. ಕೊಡಗಿನ ಜ್ವಲಂತ ಸಮಸ್ಯೆಗಳ ಕುರಿತ ವರದಿ ಪ್ರಶಸ್ತಿ ಟಿವಿ 1 ನ “ಸಾಲು ಸಾಲು ರಜೆಯಲ್ಲಿ ಮಂಜಿನ ನಗರಿಯಲ್ಲಿ ಕಾಡುವ ಟ್ರಾಫಿಕ್ ಸಮಸ್ಯೆ”ಎಂಬ ವರದಿಗೆ ಲಭಿಸಿದೆ.

ಪ್ರಶಸ್ತಿ ವಿಜೇತ ಪತ್ರಕರ್ತರಿಗೆ ಮಾ.9 ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ