ವಿಶ್ವ ದಾದಿಯರ ದಿನಾಚರಣೆಯಲ್ಲಿ ಶಿಬಿ ಎಲಿಯಾಸ್ ಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ1947 ರಲ್ಲಿ ನರಸಿಂಹರಾಜಪುರದಲ್ಲಿ ಡಾ.ಎ.ಪಿ.ಗೋವಿಂದರಾವ್ ಪ್ರಾರಂಭಿಸಿದ ವಿಜಯ ಕ್ಲಿನಿಕ್ ಎಲೆ ಮರೆ ಕಾಯಿಯಂತೆ 80 ವರ್ಷಗಳಿಂದ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿದೆ ಎಂದು ಸೀನಿಯರ್ ಜೇಸಿ ಇಂಟರ್ ನ್ಯಾಶನಲ್ ನ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಆಶ್ರಯದಲ್ಲಿ ಬಸ್ಸು ನಿಲ್ದಾಣದ ಎದುರು ಭಾಗದ ವಿಜಯ ಕ್ಲಿನಿಕ್ ನಲ್ಲಿ ವಿಶ್ವ ದಾದಿ ಯರ ದಿನಾಚರಣೆ ಪ್ರಯುಕ್ತ ಶುಶ್ರೂಷಕಿ ಶಿಬಿ ಎಲಿಯಾಸ್ ಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಪ್ರಸ್ತುತ ವಿಜಯ ಕ್ಲಿನಿಕ್ ನಲ್ಲಿ ವೈದ್ಯ ದಂಪತಿ ಡಾ.ಶಿವಕುಮಾರ್ ಹಾಗೂ ಡಾ. ಸೀತಾ ಸೇವೆ ಮುಂದುವರಿಸಿದ್ದು ಪ್ರತಿ ವರ್ಷ ಮೇ 12 ರಂದು ಆಚರಿಸುವ ಪ್ರಪಂಚದ ಅತ್ಯುತ್ತಮ ದಾದಿ ಫ್ಲಾರೆನ್ಸ್ ನೈಟಿಂಗ್ ಸವಿ ನೆನಪಿಗೆ ಆಚರಿಸುವ ವಿಶ್ವ ದಾದಿ ಯರ ದಿನಾಚರಣೆಯಂದು ವಿಜಯ ಕ್ಲಿನಿಕ್ ನಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಶಿಬಿ ಎಲಿಯಾಸ್ ಅವರನ್ನು ಗೌರವಿಸುತ್ತಿದ್ದೇವೆ ಎಂದರು.
ವಿಜಯ ಕ್ಲಿನಿಕ್ ನ ಡಾ.ಶಿವಕುಮಾರ್ ಮಾತನಾಡಿ, ಜೇಸಿ ಸಂಸ್ಥೆ ನಮ್ಮ ವೈದ್ಯಕೀಯ ಸೇವೆ ಗುರುತಿಸಿ ನಮ್ಮ ಆಸ್ಪತ್ರೆ ದಾದಿಯನ್ನು ಗೌರವಿಸುತ್ತಿರುವುದು ನಮಗೆ ಹೆಮ್ಮೆಯಾಗಿದೆ. ವೈದ್ಯಕೀಯ ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಇದೇ ರೀತಿ ಜೇಸಿ ಸಂಸ್ಥೆ ಪ್ರೋತ್ಸಾಹ ನೀಡಲಿ ಎಂದರು.ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ್ ಗೌಡ ಮಾತನಾಡಿ, ಈ ವರ್ಷ ಸಾರ್ಥಕತೆಯತ್ತ ಜೇಸಿ ಎಂಬ ಶೀರ್ಷಿಕೆಯಡಿ ಸಮಾಜದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಕಳೆದ 21 ವರ್ಷಗಳಿಂದ ದಾದಿಯಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಬಿ ಎಲಿಯಾಸ್ ಅವರನ್ನು ಗೌರವಿಸಲು ಜೇಸಿ ಸಂಸ್ಥೆಗೆ ಹೆಮ್ಮೆಯಾಗಿದೆ.ಇವರ ಸೇವೆ ಎಲ್ಲಾ ದಾದಿಯರಿಗೂ ಮಾದರಿ ಎಂದರು.
ಈ ಸಂದರ್ಭದಲ್ಲಿ ಜೇಸಿ ಕಾರ್ಯದರ್ಶಿ ಮಿಥುನ್ ಗೌಡ, ಉಪಾಧ್ಯಕ್ಷ ಅಪೂರ್ವ ರಾಘು, ಜೇಸಿ ಸದಸ್ಯರಾದ ದರ್ಶನ ನಾಥ, ಪವನ್, ಜೋಯಿ, ಸುಹಾಸ್,ಜೀವನ್ , ಪ್ರೀತಂ , ಆದರ್ಶ , ಮಿಥುನ್ ಗೌಡ ಇದ್ದರು.