ಕನ್ನಡ ಹಬ್ಬದಲ್ಲಿ ವಿಜಯ ಪ್ರಕಾಶ- ಅನುರಾಧ ಭಟ್‌ ಸಂಗೀತ ರಸದೌತಣ

KannadaprabhaNewsNetwork |  
Published : Feb 25, 2026, 03:15 AM IST
ಸಂಗೀತ ಸಂಜೆ ಕಾರ್ಯಕ್ರಮ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಕರ್ನಾಟಕ ರಾಜ್ಯೋತ್ಸವದ ಸಂಭ್ರಮವು ಈ ಬಾರಿ ಬೆಳಗಾವಿಯಲ್ಲಿ ವಿಶಿಷ್ಟ ಸಂಗೀತ ಮಂಜರಿಯಾಗಿ ಅರಳಿತು. ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕನ್ನಡ ಹಬ್ಬ ಸಂಗೀತ ಸಂಜೆ ಕಾರ್ಯಕ್ರಮವು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ, ಕನ್ನಡಿಗರ ಭಾವನೆಗಳ ಮಹಾಸಂಗಮವಾಗಿ ರೂಪುಗೊಂಡಿತು. ಸಂಜೆ ಹೊತ್ತಿಗೆಲೇ ಕ್ರೀಡಾಂಗಣ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ್ದ ನಾಗರಿಕರು, ಯುವಜನರು, ಹಿರಿಯರು ಎಲ್ಲರೂ ಒಂದೇ ಸ್ವರದಲ್ಲಿ ಕನ್ನಡ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ ರಾಜ್ಯೋತ್ಸವದ ಸಂಭ್ರಮವು ಈ ಬಾರಿ ಬೆಳಗಾವಿಯಲ್ಲಿ ವಿಶಿಷ್ಟ ಸಂಗೀತ ಮಂಜರಿಯಾಗಿ ಅರಳಿತು. ಜಿಲ್ಲಾಡಳಿತದ ವತಿಯಿಂದ ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕನ್ನಡ ಹಬ್ಬ ಸಂಗೀತ ಸಂಜೆ ಕಾರ್ಯಕ್ರಮವು ಕೇವಲ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿರದೆ, ಕನ್ನಡಿಗರ ಭಾವನೆಗಳ ಮಹಾಸಂಗಮವಾಗಿ ರೂಪುಗೊಂಡಿತು. ಸಂಜೆ ಹೊತ್ತಿಗೆಲೇ ಕ್ರೀಡಾಂಗಣ ಜನಸಾಗರದಿಂದ ತುಂಬಿ ತುಳುಕುತ್ತಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ್ದ ನಾಗರಿಕರು, ಯುವಜನರು, ಹಿರಿಯರು ಎಲ್ಲರೂ ಒಂದೇ ಸ್ವರದಲ್ಲಿ ಕನ್ನಡ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.ವೇದಿಕೆಗೆ ಆಗಮಿಸಿದ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ ಹಾಗೂ ಗಾಯಕಿ ಅನುರಾಧ ಭಟ್ ತಮ್ಮ ಸುಮಧುರ ಕಂಠದಿಂದ ಕ್ರೀಡಾಂಗಣದ ವಾತಾವರಣವನ್ನೇ ಮಂತ್ರಮುಗ್ಧಗೊಳಿಸಿದರು. ಪ್ರಾರಂಭದಿಂದಲೇ ಜನಪ್ರಿಯ ಚಿತ್ರಗೀತೆಗಳ ಸರಮಾಲೆ ಪ್ರೇಕ್ಷಕರ ಮನ ಸೆಳೆದಿತು. ಪ್ರತಿಯೊಂದು ಹಾಡಿಗೂ ಪ್ರೇಕ್ಷಕರು ಕೈತಟ್ಟಿ, ಶಿಳ್ಳೆ ಹೊಡೆದು, ಕೆಲವರು ವೇದಿಕೆಯ ಮುಂದೆ ನೃತ್ಯಮಾಡಿ ತಮ್ಮ ಉಲ್ಲಾಸವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದ ಮಧ್ಯೆ ಮಾತನಾಡಿದ ವಿಜಯ ಪ್ರಕಾಶ ಅವರು, ನಿಮ್ಮ ಪ್ರೀತಿ ನಮ್ಮ ಶಕ್ತಿ. ನಮ್ಮ ಹಾಡಿಗೆ ನೀವೆಲ್ಲರೂ ತಲೆದೂಗಿಸಿ ಕುಣಿದದ್ದು ನಮಗೆ ಅತಿ ದೊಡ್ಡ ಗೌರವ. ಬೆಳಗಾವಿಯ ಪ್ರೀತಿ ಸದಾ ನಮ್ಮ ಹೃದಯದಲ್ಲಿ ಉಳಿಯುತ್ತದೆ ಎಂದು ಹೇಳಿದಾಗ ಕ್ರೀಡಾಂಗಣವೇ ಚಪ್ಪಾಳೆಗಳಿಂದ ಗದ್ದಲಗೊಳ್ಳಿತು. ಅಭಿಮಾನಿಗಳ ಕೋರಿಕೆಯ ಮೇರೆಗೆ ಹಲವು ಹಾಡುಗಳನ್ನು ಅವರು ವಿಶೇಷವಾಗಿ ಪ್ರಸ್ತುತಪಡಿಸಿದರು.ಕಾಂತಾರ ಚಿತ್ರದ ಸಿಂಗಾರ ಸಿರಿಯೆ ಗೀತೆ ಮೊಳಗುತ್ತಿದ್ದಂತೆಯೇ ಪ್ರೇಕ್ಷಕರು ಒಂದೇ ಸ್ವರದಲ್ಲಿ ಹಾಡಿಗೆ ಜೊತೆಯಾದರು. ಆ ಹಾಡಿನ ಲಯ, ಭಾವ ಮತ್ತು ಕನ್ನಡದ ಸುವಾಸನೆ ಎಲ್ಲರ ಮನಸ್ಸನ್ನು ಮಿಡಿಸಿತು. ಯಾರೇ ಬಂದರು ಎದುರ್ಯಾರೆ ನಿಂತರು, ಪ್ರೀತಿ ಹಂಚುವ ಯಜಮಾನ… ಎಂಬ ಗೀತೆಗೂ ಅಪಾರ ಮೆಚ್ಚುಗೆ ವ್ಯಕ್ತವಾಯಿತು.ಇದಲ್ಲದೆ ರಾಬರ್ಟ್ ಚಿತ್ರದ ಕಣ್ಣು ಹೊಡಿಯಾಕ…ಹಾಡಿಗೆ ಯುವಕರು ಭರ್ಜರಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಒಂದು ಮಳೆ ಬಿಲ್ಲು, ಒಂದು ಹನಿ ಮೋಡ… ಹಾಡು ಮಧುರ ಭಾವನೆಯನ್ನು ಮೂಡಿಸಿ ಕ್ಷಣಕಾಲ ಕ್ರೀಡಾಂಗಣದಲ್ಲಿ ನಿಶ್ಶಬ್ದವಾದ ಸೌಂದರ್ಯವನ್ನು ತಂದಿತು. ಹಳೆಯ ನೆನಪುಗಳನ್ನು ಮೆಲುಕು ಹಾಕಿಸಿದ ಬೆಸುಗೆ ಚಿತ್ರದ ಬೇಸುಗೆ ಬೇಸುಗೆ… ಗೀತೆ ಹಾಗೂ ಸಿ.ಬಿ.ಐ. ಶಂಕರ್ ಚಿತ್ರದ ಗೀತಾಂಜಲಿ ಹಾಲುಗೆನ್ನೆಗೆ… ಹಾಡುಗಳು ಹಿರಿಯರ ಮನಸ್ಸನ್ನು ತಟ್ಟಿದವು.ಅದೇ ರೀತಿ ಗಾಳಿಪಟ ಚಿತ್ರದ ಕವಿತೆ ಕವಿತೆ ನೀನೇಕೆ… ಹಾಗೂ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ… ಹಾಡುಗಳು ಯುವಜನರಲ್ಲಿ ಅಪಾರ ಉತ್ಸಾಹ ಮೂಡಿಸಿತು. ಸಂಗೀತದ ಪ್ರತಿಯೊಂದು ಲಯವೂ ಕನ್ನಡ ಹಬ್ಬದ ಉತ್ಸವಕ್ಕೆ ಹೊಸ ಚೈತನ್ಯ ತುಂಬಿತು.ಕಾರ್ಯಕ್ರಮದ ಅಂತ್ಯದಲ್ಲಿ ಜಾನಪದ ಗೀತೆಗಳನ್ನು ಅಖಿಲಾ ಅವರು ಮನಮುಟ್ಟುವ ರೀತಿಯಲ್ಲಿ ಪ್ರಸ್ತುತಪಡಿಸಿ ಜನರನ್ನು ಸಂಭ್ರಮದಲ್ಲಿ ತೇಲಿಸಿದರು. ಸಂಪೂರ್ಣ ಕಾರ್ಯಕ್ರಮವು ಬೆಳಗಾವಿ ಜನತೆಗೆ ಸ್ಮರಣೀಯ ಅನುಭವವಾಗಿ ಉಳಿಯಿತು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಂಗೀತದ ಸಂಭ್ರಮ ಒಂದೇ ವೇದಿಕೆಯಲ್ಲಿ ಅರಳಿದ ಈ ಸಂಗೀತ ಸಂಜೆ, ರಾಜ್ಯೋತ್ಸವದ ಅರ್ಥವನ್ನು ಮತ್ತಷ್ಟು ಗಾಢಗೊಳಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು