ಕನ್ನಡಪ್ರಭ ವಾರ್ತೆ ಸಾಗರ
ನಾಗರಿಕ ವೇದಿಕೆ ವತಿಯಿಂದ ಮೇ. ೧೯ರ ಸೋಮವಾರ ಸಂಜೆ ೪ಕ್ಕೆ ಪಟ್ಟಣದಲ್ಲಿ ಬೃಹತ್ ವಿಜಯ ಸಿಂದೂರ ತಿರಂಗ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಹೆಚ್.ಹಾಲಪ್ಪ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಪಾಕಿಸ್ತಾನ ನಡುವೆ ನಡೆದ ಸೈನಿಕ ಕಾರ್ಯಾಚರಣೆಯಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಪಹಲ್ಗಾಮ್ ಉಗ್ರಕೃತ್ಯದ ಹಿನ್ನೆಲೆಯಲ್ಲಿ ನಡೆದ ಮೂರು ಪಡೆಯ ಕಾರ್ಯಾಚರಣೆಯಲ್ಲಿ ಭಾರತದ ಸೈನಿಕರು ವೀರಾವೇಶ ಮೆರೆದಿದ್ದು, ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ನಮ್ಮ ಸೈನಿಕರ ನೈತಿಕಸ್ಥೈರ್ಯ ಹೆಚ್ಚಿಸುವುದು ಹಾಗೂ ನಿಮ್ಮ ಜೊತೆ ದೇಶವಾಸಿಗಳು ಇದ್ದಾರೆ ಎನ್ನುವ ಆತ್ಮವಿಶ್ವಾಸ ತುಂಬಲು ಈ ವಿಜಯ ಸಿಂದೂರ ತಿರಂಗಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸೋಮವಾರ ಸಂಜೆ ೪ಕ್ಕೆ ಮಹಾಗಣಪತಿ ದೇವಸ್ಥಾನದಿಂದ ಬೃಹತ್ ತಿರಂಗಯಾತ್ರೆ ಹೊರಡಲಿದೆ. ಸಾಗರದಲ್ಲಿ ಪ್ರಥಮ ಬಾರಿಗೆ ಯಾತ್ರೆಯಲ್ಲಿ ಒಂದು ಕಿ.ಮೀ. ಉದ್ದದ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆ ನಡೆಯಲಿದ್ದು, ಇತರೆ ಯಾವುದೇ ಧ್ವಜವನ್ನು ಬಳಕೆ ಮಾಡದೆ, ಕೇವಲ ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಈ ಯಾತ್ರೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.ಮಹಾಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ಲಿಂಬೂಸರ್ಕಲ್, ಎಸ್.ಎನ್.ನಗರ ವೃತ್ತ, ಎಕ್ಸ್ ವೃತ್ತದ ಮೂಲಕ ಅಶೋಕ ರಸ್ತೆಯಲ್ಲಿ ಸಾಗಿ ಸಾಗರ ಹೋಟೆಲ್ ವೃತ್ತದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನು ಏರ್ಪಡಿಸಿದೆ. ಸಭೆಯಲ್ಲಿ ವಾಗ್ಮಿ ಆದರ್ಶ ಗೋಖಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ತಿರಂಗಯಾತ್ರೆಯು ಸಾಗರ, ಹೊಸನಗರ, ಸೊರಬ ತಾಲೂಕು ಒಳಗೊಂಡಂತೆ ನಡೆಸಲಾಗುತ್ತಿದ್ದು, ಸುಮಾರು ೧೦ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಜನರು ಸ್ವಯಂಪ್ರೇರಿತರಾಗಿ ತಿರಂಗಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ರೈತ ಸಂಘ, ದಲಿತ ಸಂಘರ್ಷ ಸಮಿತಿ, ವಿವಿಧ ಸಾಮಾಜಿಕ ಸಂಘಟನೆಗಳಿಗೆ, ಪ್ರಮುಖರಿಗೆ ಈಗಾಗಲೆ ಆಹ್ವಾನ ನೀಡಿದೆ. ಸಾರ್ವಜನಿಕರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಸೈನಿಕರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಪ್ರಮುಖರಾದ ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ಸಂತೋಷ್ ಶಿವಾಜಿ ಉಪಸ್ಥಿತರಿದ್ದರು.