ಕುಷ್ಟಗಿ: ಪಟ್ಟಣದ ಗದಗ ವಾಡಿ ಮಾರ್ಗದಲ್ಲಿರುವ ₹31 ಕೋಟಿ ವೆಚ್ಚದ ರೈಲ್ವೆ ರಸ್ತೆ ಮೇಲ್ಸೇತುವೆ (ಆರ್‌ಒಬಿ) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಅತಿ ಶೀಘ್ರದಲ್ಲಿ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.
ಕುಷ್ಟಗಿ ಮತ್ತು ಕೊಪ್ಪಳ ಮಾರ್ಗವಾಗಿ ಸಂಚರಿಸುವ ವಾಹನಗಳು ರೈಲ್ವೆ ಗೇಟ್ ಬಳಿ ರೈಲುಗಳ ಸಂಚಾರದ ಸಮಯದಲ್ಲಿ ದೀರ್ಘಕಾಲ ಕಾಯಬೇಕಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಸಮಯ ವ್ಯರ್ಥವಾಗುವ ಜತೆಗೆ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸಾರ್ವಜನಿಕರ ಬಹುದಿನಗಳ ನಿರೀಕ್ಷೆಯಲ್ಲಿರುವ ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಸರ್ವಿಸ್ ರಸ್ತೆ ನಿರ್ಮಾಣ: ಮೇಲ್ಸೇತುವೆ ಸುತ್ತಮುತ್ತಲಿನ ಜಮೀನುಗಳಿಗೆ ಎತ್ತಿನ ಬಂಡಿ ಹಾಗೂ ಕೃಷಿ ವಾಹನಗಳಲ್ಲಿ ತೆರಳುವ ರೈತರಿಗೆ ತೊಂದರೆಯಾಗದಂತೆ ಸರ್ವಿಸ್ ರಸ್ತೆ ನಿರ್ಮಿಸಲಾಗುವುದು. ಮೇಲ್ಸೇತುವೆಯ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಸಂಸದರು, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಮೇಲ್ಸೇತುವೆಯನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.ಕಾಂಗ್ರೆಸ್ ಮುಖಂಡ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ, ಲಾಡ್ಲೇಮಷಾಕ ದೋಟಿಹಾಳ, ಉಮೇಶ ಮಂಗಳೂರು, ಮಹಾಂತೇಶ ಅಗಸಿಮುಂದಿನ್, ಮೈನುದ್ದೀನ್ ಮುಲ್ಲಾ, ಮಾನಪ್ಪ ತಳವಾರ, ಬಸವರಾಜ ಹೊರಪ್ಯಾಟಿ, ನಜೀರಸಾಬ ಮೂಲಿಮನಿ ಇದ್ದರು.
ಈಗಾಗಲೇ ಸಿಂಧನೂರು ನಗರದಿಂದ ರೈಲು ಸಂಚಾರ ಆರಂಭವಾಗಿದೆ. ಆದರೆ ಕುಷ್ಟಗಿಯಿಂದ ಇನ್ನೂ ರೈಲು ಸಂಚಾರ ಆರಂಭವಾಗದಿರುವುದೇಕೆ ಎಂದು ಪ್ರಶ್ನಿಸಿದ ಸಮಿತಿ ಸದಸ್ಯರು, ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕುಷ್ಟಗಿಯಿಂದ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.