ಮರಿಯಮ್ಮನಹಳ್ಳಿ: ಕಲ್ಯಾಣ ಕರ್ನಾಟಕದಲ್ಲಿ ನಮ್ಮ ಅವಳಿ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ಉಳಿದ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿ ಮೊದಲನೇ ಸ್ಥಾನದಲ್ಲಿ ಇರಲು ಬಯಸುವೆ ಎಂದು ಸಂಸದ ಈ.ತುಕಾರಾಂ ಹೇಳಿದರು.
ಅವಳಿ ಜಿಲ್ಲೆಗಳಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದುವರೆಗೂ ಆಮೆಗತಿಯಲ್ಲಿ ನಡೆಯುತ್ತಿರವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗವಾಗಿ ಕೆಲಸ ನಡೆಯುವಂತೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಜರೂರಾಗಿ ನಡೆಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ವೇಗವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆದು ಜನರ ಅನುಕೂಲಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ಮರಿಯಮ್ಮನಹಳ್ಳಿಯಿಂದ ಹೊಸಪೇಟೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳು ನಡೆದಿವೆ. ಈ ಹಿನ್ನೆಲೆಯಲ್ಲಿ 2.7 ಕಿ.ಮೀ. ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗುವುದು. ಈ ಪ್ರದೇಶದಲ್ಲಿ ಸಾಕಷ್ಟು ಸಾವು- ನೋವು ಸಂಭವಿಸಿವೆ. 18 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ಇದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ ಎಂದರು.ಮರಿಯಮ್ಮನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯಿಂದ ಶಿವಮೊಗ್ಗ ಹೆದ್ದಾರಿ ಕೈಗೊಳ್ಳಲು ನಾನು ಮತ್ತು ಸಂಸದರಾದ ಬಿ.ವೈ. ರಾಘವೇಂದ್ರ, ಡಾ.ಪ್ರಭಾ ಮಲ್ಲಿಕಾರ್ಜುನ ಸೇರಿ ಹೆದ್ದಾರಿ ಸಂಪರ್ಕ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಕೊಡಲು ಮುಂದಾಗಿದ್ದೇವೆ ಎಂದರು.
20 ವರ್ಷಗಳ ಕಾಲ ಸಂಸದರಾದವರು ಏನು ಮಾಡಿದ್ದಾರೋ ಗೊತ್ತಿಲ್ಲ, ನಾನು ನುಡಿದಂತೆ ನಡೆಯುವೆ. ಕೊಟ್ಟೂರು, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣಗಳನ್ನು ಮಾದರಿ ರೈಲು ನಿಲ್ದಾಣಗಳನ್ನಾಗಿ ಮಾಡುವೆ ಎಂದರು.ಇನ್ನು ದೇವಲಾಪುರ, ಡಣಾನಾಯಕನಕೆರೆ, ಹಾರುವನಹಳ್ಳಿ, ಗೊಲ್ಲರಹಳ್ಳಿ ಗ್ರಾಮಗಳ, ಪೋತಲಕಟ್ಟೆ ಗ್ರಾಮಗಳಿಗೂ ಸರ್ವೀಸ್ ರಸ್ತೆಗಳನ್ನು ಮುಂದಿನ ದಿನಗಳಲ್ಲೂ ಹಂತ ಹಂತವಾಗಿ ಮಾಡಲಾಗುವುದು. ಮರಿಯಮ್ಮನಹಳ್ಳಿ ಎಲ್.ಸಿ.20 ಗೇಟಿಗೂ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸುವೆ ಎಂದರು.ಈ ಭಾಗದ ಪ್ರಯಾಣಿಕರು ಬೆಂಗಳೂರಿಗೆ ತೆರಳಲು ಸ್ವಾಮಿಹಳ್ಳಿಯ ಯಶವಂತನಗರ ಮೂಲಕ ರಾಯದುರ್ಗ ಮೂಲಕ ಚಿತ್ರದುರ್ಗ, ತುಮಕೂರು, ಬೆಂಗಳೂರಿಗೆ ರೈಲು ಮಾರ್ಗಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದರು.
ಮರಿಯಮ್ಮನಹಳ್ಳಿ ಸಮೀಪದ ಡಣಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ₹33 ಕೋಟಿ ಸೇತುವೆ, ಅಂಡರ್‌ಪಾಸ್ ನಿರ್ಮಾಣ ಕಾಮಗಾರಿಗೆ ಸಂಸದ ಈ. ತುಕಾರಾಂ ಭೂಮಿಪೂಜೆ ನೆರವೇರಿಸಿದರು.