ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಚಾಲನೆ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕೆ ಚಾಲನೆ-ಹೆಗ್ಗನಹಳ್ಳಿ ಕ್ರಾಸ್‌ನಲ್ಲಿ ಶಾಸಕ ಮುನಿರಾಜು ಅವರಿಂದ ಚಾಲನೆ, ಯೋಜನೆ ಸದುಪಯೋಗಕ್ಕೆ ಕರೆ

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನ ಆಯೋಜಿಸಲಾಗಿದೆ ಎಂದು ಶಾಸಕ ಎಸ್‌. ಮುನಿರಾಜು ತಿಳಿಸಿದರು.

ದಾಸರಹಳ್ಳಿ‌ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ಕ್ರಾಸ್‌ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಾಗರಿಕರ ಅಭಿವೃದ್ಧಿಗೆ ನೂರಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಲಾಭವನ್ನು ಪಡೆದ ಫಲಾನುಭವಿಗಳು ದೇಶದ ಪ್ರತಿ ಮನೆಯಲ್ಲೂ ಇದ್ದಾರೆ. ಕೇಂದ್ರ ಸರಕಾರದ ಯೋಜನೆಗಳು ಸಮಾಜದ ಕಟ್ಟ ಕಡೆಯ ನಾಗರಿಕರಿಗೂ ತಲುಪಿಸುವುದು ಕೇಂದ್ರ ಸರಕಾರದ ಗುರಿಯಾಗಿದೆ ಎಂದರು.

ಕೇಂದ್ರದ ಸರ್ಕಾರದ ಮುದ್ರಾಯೋಜನೆ, ಜನಧನ್ ಯೋಜನೆ, ಪಿ.ಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಕೃಷಿ ಸನ್ಮಾನ್ ಯೋಜನೆ, ಅನ್ನ ಭಾಗ್ಯ ಯೋಜನೆ, ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ಎಲ್‌ಇಡಿ ಪರದೆಯ ವಾಹನಗಳ ಮೂಲಕ ಗ್ರಾಪಂ ಹಾಗೂ ನಗರ ಪ್ರದೇಶದಲ್ಲಿ ಸಂಚರಿಸಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳನ್ನು ಸಂಘಟಿಸುವುದು, ಈ ಯೋಜನೆಗಳಿಂದ ವಂಚಿತರಾದ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುವಂತೆ ಮಾಡುವ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಿ, ಅರಿವು ಮೂಡಿಸುವಂತಾಗಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಭೋದಿಸಲಾಯಿತು. ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಮಾಹಿತಿಯ ಕಿರು ಪುಸ್ತಕ ಹಾಗೂ 2024 ರ ಕ್ಯಾಲೆಂಡರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಬಿಜೆಪಿ ಅಧ್ಯಕ್ಷ ಮೇದರಹಳ್ಳಿ ಸೋಮಶೇಖರ್ ಪ್ರದಾನ ಕಾರ್ಯದರ್ಶಿಗಳಾದ ವಿನೋದ್ ಗೌಡ, ಎಚ್.ಅರ್‌.ಪ್ರಕಾಶ್, ಟಿ.ಶಿವಕುಮಾರ್, ಪಿ.ಎಚ್.ರಾಜು, ಬಿಜೆಪಿ ಮುಖಂಡರಾದ ಸಪ್ತಗಿರಿ ಅನಂದ್, ಬಿಜೆಪಿ ಕಾರ್ಯಕರ್ತರು, ಮಹಿಳಾ ಮುಖಂಡರು, ಬ್ಯಾಂಕ್ ಸಿಬ್ಬಂದಿ ಇದ್ದರು.--ಚಿತ್ರ: ಪ್ರತ್ಯೇಕ ಫೈಲ್‌ನಲ್ಲಿ ಬರಲಿವೆ.

Share this article