ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ
ಗ್ರಾಮಾಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಿ.ಪಿ.ಹರೀಶ್ ನೇತ್ರತ್ವದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ತಾಲೂಕು ಕಚೇರಿಗೆ ಆಗಮಿಸಿ ಗ್ರೇಡ್-೨ ತಹಸೀಲ್ದಾರ್ ಬಿ.ಆರ್.ಲೋಕೇಶ್ ರವರಿಗೆ ಮನವಿಪತ್ರ ಸಲ್ಲಿಸಿದರು.
ನಂತರ ಮಾತನಾಡಿದ ಡಿ.ಪಿ.ಹರೀಶ್ ಅವರು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮತ್ತು ಅಪರ ಜಿಲ್ಲಾಧಿಕಾರಿ ಕನಕರೆಡ್ಡಿ ಅವರು ಸರ್ಕಾರದ ಕಾನೂನು-ಸುತ್ತೋಲೆಗಳ ವಿರುದ್ಧವಾದ ನಡವಳಿಗಳು, ನಿಯಮಬಾಹಿರ ಆದೇಶಗಳು ಹಾಗೂ ದರ್ಪ ತುಂಬಿದ ನಡವಳಿಕೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಬ್ರಿಟಿಷ್ ಮಾದರಿ ಆಳ್ವಿಕೆ ಮಾದರಿಯನ್ನು ಜೀವಂತವಾಗಿರಿಸಿದ್ದಾರೆ. ಅವರಿಬ್ಬರನ್ನೂ ಈ ಕೂಡಲೇ ಚಿಕ್ಕಮಗಳೂರು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು. ರಾಜ್ಯದ ಯಾವುದೇ ಜಿಲ್ಲೆಗೆ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ ಸ್ಥಳ ನಿಯುಕ್ತಿಗೊಳಿಸದೆ ಅವರು ಮಾಡಿರುವ ಕಾನೂನು ಬಾಹಿರ ಮತ್ತು ಅಧೀನ ನೌಕರ ವಿರೋಧಿ ಆದೇಶಗಳನ್ನು ವಿಚಾರಣೆ ನಡೆಸಿ ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಂಡು ಈ ವೃಂದದ ೯೦೦೦ ನೌಕರರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದರು.