ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ

KannadaprabhaNewsNetwork | Published : Jan 30, 2024 2:01 AM

ಸಾರಾಂಶ

ಒಂದು ಶಾಲೆ ನೂರು ವರ್ಷಗಳು ಪೂರೈಸುವ ಸಂದರ್ಭದ ಹಿಂದೆ ಬಹಳಷ್ಟು ಶ್ರಮ ಇರುತ್ತದೆ ಇಲ್ಲಿಂದಲೇ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ಗ್ರಾಮವನ್ನು ಮಾದರಿ ಗ್ರಾಮ ಮಾಡಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರ

ರಾಜಕಲ್ಲಹಳ್ಳಿ ಶಾಲೆಯ ಶತಮಾನೋತ್ಸವದ ಹಿನ್ನಲೆಯಲ್ಲಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯ ರೀತಿಯಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು

ತಾಲೂಕಿನ ವೇಮಗಲ್ ಹೋಬಳಿಯ ರಾಜಕಲ್ಲಹಳ್ಳಿ ಸರ್ಕಾರಿ ಶಾಲೆಯ ಶತಮಾನೋತ್ಸವ ಅಂಗವಾಗಿ ಶಾಲೆಯ ಹಳೆಯ ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರಿಂದ ನಡೆದ ಶತಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ರಂಗಮಂಟಪ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶತಮಾನ ಪೂರೈಸಿದ ಶಾಲೆ

ಒಂದು ಶಾಲೆ ನೂರು ವರ್ಷಗಳು ಪೂರೈಸುವ ಸಂದರ್ಭದ ಹಿಂದೆ ಬಹಳಷ್ಟು ಶ್ರಮ ಇರುತ್ತದೆ ಇಲ್ಲಿಂದಲೇ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನವನ್ನು ಕಟ್ಟಿಕೊಟ್ಟಿದ್ದಾರೆ ಇಂತಹ ಗ್ರಾಮವನ್ನು ಮಾದರಿ ಮಾಡಲು ಮುಂದಿನ ಹದಿನೈದು ದಿನಗಳಲ್ಲಿ ಗ್ರಾಮದಲ್ಲಿಯೇ ಸಭೆ ಮಾಡಿ ಸಮಸ್ಯೆಗಳ ಜೊತೆಗೆ ಕಾಮಗಾರಿಗಳನ್ನು ಪಟ್ಟಿ ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.

ಪ್ರತಿಯೊಂದು ಗ್ರಾಮದಲ್ಲಿಯೂ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡಿದಾಗ ಮಾತ್ರವೇ ಅ ಗ್ರಾಮದಲ್ಲಿ ಎಲ್ಲಾ ಹಂತದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ. ರಾಜ್ಯ ಸರಕಾರದಲ್ಲಿ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ. ಈಗಾಗಲೇ ಸಿದ್ದರಾಮಯ್ಯ ಅವರು ೧೦೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಜೊತೆಗೆ ಶಿಕ್ಷಣ, ಆರೋಗ್ಯ, ಉದ್ಯೋಗ, ಮತ್ತು ಕೃಷಿಗೆ ಅಧ್ಯತೆ ನೀಡುವ ಸಂದರ್ಭದಲ್ಲಿ ನಾನು ಯಾವಾಗಲೂ ಮುಂದೆ ಇರುತ್ತೇನೆ ಎಂದರು.

ಓದಿದ ಶಾಲೆಯನ್ನು ಮರೆಯದಿರಿ

ನಗರೂರು ಶೈಲೇಶ್ವರ ಗಾಣಿಗರ ಸಂಸ್ಥಾನ ಮಠದ ಶ್ರೀ ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ ಸಾವಿರಾರು ಕುಟುಂಬಗಳಿಗೆ ಬೆಳಕು ತರುವ ನಿಟ್ಟಿನಲ್ಲಿ ರಾಜಕಲ್ಲಹಳ್ಳಿ ಶಾಲೆಯು ನಡೆದುಕೊಂಡು ಬಂದಿದೆ. ಅದೇ ರೀತಿಯಲ್ಲಿ ನಾವು ಓದಿದ ಶಾಲೆಯನ್ನು ಮರೆಯಬಾರದು ಎಂದರು.

ಪೇಟೆಚಾಮನಹಳ್ಳಿ ಶಾಲೆ ಅಭಿವೃದ್ಧಿ

ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಸರಕಾರಿ ಶಾಲೆಗಳನ್ನು ಗುರುತಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇ ಆದಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ ಈಗಾಗಲೇ ಕೋಲಾರ ನಗರದ ಪೇಟೆಚಾಮನಹಳ್ಳಿ ಶಾಲೆಯ ಶತಮಾನೋತ್ಸವ ಅಂಗವಾಗಿ ಸುಮಾರು ೩೦ ಲಕ್ಷ ಅನುದಾನದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಶಾಲೆಯ ಶೌಚಾಲಯಗಳನ್ನು ದುರಸ್ತಿ ಮಾಡಲು ಅನುದಾನ ಕೇಳಿದ್ದು ಕೂಡಲೇ ಕೆಲಸ ಪ್ರಾರಂಭ ಮಾಡಿ ಹಣ ಬಿಡುಗಡೆ ಮಾಡಲು ಸಿದ್ದ ಎಂದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಇವತ್ತು ಖಾಸಗಿ ಶಾಲೆಗಳ ಮೇಲೆ ಪೋಷಕರಿಗೆ ವ್ಯಾಮೋಹ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ನೂರು ವರ್ಷಗಳು ಪೂರೈಸಿದ ಶಾಲೆಗಳನ್ನು ಪಟ್ಟಿ ಮಾಡಿ ಅಭಿವೃದ್ಧಿ ಮಾಡಬೇಕು. ಇಲ್ಲದೇ ಹೋದರೆ ಮುಂದೆ ಸರ್ಕಾರಿ ಶಾಲೆಗಳನ್ನು ಉಳಿಸುಕೊಳ್ಳುವುದು ಕಷ್ಟವಾಗುತ್ತದೆ ಎಂದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಶಿಕ್ಷಣದ ಶಕ್ತಿಯೇ ಮನುಷ್ಯನ ಮುಂದಿನ ಜೀವನವಾಗಿದೆ. ನಾವು ಓದಿದ ಶಾಲೆಗೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬುದನ್ನು ಈ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಇದೇ ರೀತಿ ಪ್ರತಿಯೊಂದು ಶಾಲೆಯ ಹಳೆ ವಿಧ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮದ ಅಪ್ಪಯ್ಯಣ್ಣ ಮತ್ತು ಮಂಜುನಾಥ್ ಅವರ ಕುಟುಂಬದವರು ಶಾಲೆಗೆ ರಂಗಮಂಟಪವನ್ನು ಕೊಡುಗೆಯಾಗಿ ನೀಡಿದರು, ವೇದಿಕೆಯಲ್ಲಿ ನಾಗಲಾಪುರ ಮಠದ ಶ್ರೀ ತೇಜೇಶ ಲಿಂಗ ಶುವಾಚಾರ್ಯಸ್ವಾಮಿಗಳು, ಶಿವನಾಪುರದ ಶ್ರೀ ಪ್ರಣವಾನಂದಪುರಿ ಸ್ವಾಮಿಗಳು, ಬಿಇಒ ಕನ್ನಯ್ಯ, ತಾಪಂ ಇಒ ಮುನಿಯಪ್ಪ, ಟಿಎಪಿಸಿಎಂಎಸ್ ನಿರ್ದೇಶಕ ನಾಗನಾಳ ಸೋಮಣ್ಣ, ವೇಮಗಲ್ ಸೊಸೈಟಿ ಅಧ್ಯಕ್ಷ ನಂಜುಂಡಗೌಡ, ಮತ್ತಿತರರು ಇದ್ದರು.

Share this article