ಕನ್ನಡ ಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಸಿ.ಎಸ್.ಪುರ ಹೋಬಳಿ ಅಂಕಳಕೊಪ್ಪ ಗ್ರಾಮದಲ್ಲಿ ಸುಮಾರು ನೂರಾರು ವರ್ಷಗಳಿಂದ ಮನೆ ನಿರ್ಮಾಣ ಮಾಡಿ ಜೀವನ ನಡೆಸುತ್ತಿರುವ ಇವರಿಗೆ ತಹಸೀಲ್ದಾರ್ ಹಾಗೂ ಅಧಿಕಾರಿಗಳು ಗುಂಡು ತೋಪು ಎಂದು ಜಾಗ ಖಾಲಿ ಮಾಡಿ ಎಂದು ನೋಟಿಸ್ ನೀಡಿರುವುದು ಸರಿಯಲ್ಲ ಎಂದು ತುರುವೇಕೆರೆ ಮಾಜಿ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.ಅಂಕಳಕೊಪ್ಪ ಗ್ರಾಮದಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 35 ಜನ ಈ ಜಾಗದಲ್ಲಿ ವಾಸ ಮಾಡುತ್ತಿದ್ದು ಗ್ರಾಮ ಪಂಚಾಯಿತಿಯವರು ಈ ಜಾಗಕ್ಕೆ ಮನೆ ಕಟ್ಟಲು ಪರವಾನಿಗೆ ನೀಡಿದ್ದಾರೆ, ವಿದ್ಯುತ್ ನೀಡಿದ್ದಾರೆ, ಇವರು ನಿರ್ಮಿಸಿರುವ ಮನೆಗಳಿಗೆ ಸರ್ಕಾರದಿಂದ ಎಲ್ಲಾ ಸವಲತ್ತು ನೀಡಿದ್ದು ಈಗ ಮನೆ ಖಾಲಿ ಎಂದು ತಿಳಿಸಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಈ ಜಾಗದಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಜನರನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ಈ ಗ್ರಾಮಕ್ಕೆ ಅಂಗನವಾಡಿ ಕಟ್ಟಡ ಇದೆ , ಶಾಲಾ ಕಟ್ಟಡವಿದೆ , ದೇವಾಲಯಗಳಿವೆ ಆದರೂ ಸಹ ಅಧಿಕಾರಿಗಳು ಬಂದು ತೊಂದರೆ ಕೊಡುತ್ತಿರುವುದು ಇದು ಸರಿಯಲ್ಲ. ಈ ಗ್ರಾಮಕ್ಕೆ ಸರ್ಕಾರದಿಂದ ಏನಾದರೂ ಯೋಜನೆ ಬಂದಲ್ಲಿ ಬೇರೆ ಜಾಗದಲ್ಲಿ ಕಟ್ಟಬಹುದಾದ ಜಾಗವಿಲ್ಲದಿದ್ದರೆ ನನ್ನ ಜಾಗದಲ್ಲಿ ಬೇಕಾದರೆ ಈ ಗ್ರಾಮಕ್ಕೆ ಕೊಡುತ್ತೇನೆ ಎಂದರು.ನಾನು ಸಹ ಐದು ವರ್ಷ ಶಾಸಕನಾಗಿದ್ದೆ ಹಾಗೂ ಈ ಗ್ರಾಮ ಪಂಚಾಯಿತಿ ಅಧ್ಯಕ್ಷನೂ ಸಹ ಆಗಿದ್ದೆ . ಎಲ್ಲೂ ಸಹ ಈ ಜಾಗಕ್ಕೆ ಗುಂಡು ತೋಪು ಎಂದು ತಿಳಿದು ಬಂದಿಲ್ಲ ಎಂದು ತಿಳಿಸಿದರು. ಈ ಗ್ರಾಮದ ಜನರಿಗೆ ಜಾಗ ಬಿಡಿಸಲು ಏನಾದರೂ ತೊಂದರೆ ಕೊಟ್ಟರೆ ನಾನು ಜಿಲ್ಲಾಧಿಕಾರಿ ಕಚೇರಿ ಹಾಗೂ ವಿಧಾನಸೌಧ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.ಗ್ರಾಮವನ್ನು ಸ್ಕೆಚ್ ನಲ್ಲಿ ಸೇರಿಸಿದ ಸರ್ವೇ ಅವೈಜ್ಞಾನಿಕ. ಸರ್ವೇ ನಂಬರ್ 168 ರಲ್ಲಿ 6 ಎಕರೆ ಗುಂಡುತೋಪು ಜಾಗ ಈ ಗ್ರಾಮದ ಪಕ್ಕದಲ್ಲಿರುತ್ತದೆ. ಯಾವ ಉದ್ದೇಶಕ್ಕೆ ಇಡೀ ಗ್ರಾಮವನ್ನು ಖಾಲಿ ಮಾಡಿಸಲು ಉಪ ವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಮುಂದಾಗಿದ್ದಾರೆ ತಿಳಿದಿಲ್ಲ. ಏಕಾಏಕಿ ನಾರನಹಳ್ಳಿ ಬಳಿ ನಿಮಗೆ ಜಾಗ ನೀಡುತ್ತೇವೆ ಎನ್ನುತ್ತಿದ್ದಾರೆ. ಲೋಕಾಯುಕ್ತ ಹೆಸರು ಮುಂದೆ ತಂದು ಮುಗ್ಧ ಜನರಿಗೆ ತೊಂದರೆ ನೀಡುವುದು ಸರಿಯಲ್ಲ. ದುಡ್ಡಿಗಾಗಿ ಇದೆಲ್ಲಾ ಮಾಡುವುದಾದರೆ ಅದನ್ನೂ ಕುಳಿತು ಮಾತನಾಡೋಣ ಎಂದು ಕುಟುಕಿದರು.ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಪಡೆದ ಇಲ್ಲಿನ ಬಡ ರೈತರು ತಮ್ಮ ಒಡವೆ ಮಾರಿ ಮನೆ ಕಟ್ಟಿಸಿಕೊಂಡಿದ್ದಾರೆ. ನೂರಾರು ವರ್ಷಗಳಿಂದ ಯಾರು ಕೇಳದ ಗುಂಡುತೋಪು ಜಾಗ ಎಂಬ ಮಾತು ಇಲ್ಲಿನ ಜನರಿಗೆ ಆತಂಕ ತಂದಿದೆ. ಜೆಸಿಬಿ ಯಂತ್ರಗಳನ್ನು ತಂದು ಮನೆಗಳನ್ನು ಕೆಡವಲು ತಾಲೂಕು ಆಡಳಿತ ಮುಂದಾದರೆ ನಮ್ಮ ಹೆಣಗಳ ಮೇಲೆ ಜೆಸಿಬಿ ಹರಿಸಿ ಮುಂದುಬರೆಯಬೇಕಿದೆ ಎಂದು ಎಚ್ಚರಿಸಿದರು.