ಅಜೀಜಅಹ್ಮದ ಬಳಗಾನೂರ
ತಾಲೂಕಿನ ರಾಮಾಪುರ ಗ್ರಾಮದ 11 ವರ್ಷದ ಸುಚೇತ್ ಧರೆಣ್ಣವರ ಅಂತಾರಾಷ್ಟ್ರೀಯ ಟೆಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದ ಬಾಲಕ. ತಾಲೂಕಿನ ಅದರಗುಂಚಿಯಲ್ಲಿರುವ ಸಿಐಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.
ಈ ಸ್ಪರ್ಧೆಗೂ ಪೂರ್ವ ಸುಚೇತ್ ಹಲವು ಪಂದ್ಯಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ತೋರಿದ್ದಾನೆ. 2024ರಲ್ಲಿ ಬೆಂಗಳೂರು, ಬೆಳಗಾವಿ, ಹೊಸಪೇಟೆ, ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಪ್ರಥಮ ಹಾಗೂ ಚಿಕ್ಕಮಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರನ್ನರ್‌ಅಪ್ ಪ್ರಶಸ್ತಿ ಪಡೆದಿದ್ದಾನೆ. ವಿಜಯ ಕರಿಗಾರ ಮುಖ್ಯ ತರಬೇತುದಾರರಾಗಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ತರಬೇತಿದಾರ Ti long ಅವರು ಸುಚೇತನಿಗೆ ತರಬೇತಿ ನೀಡುತ್ತಿದ್ದಾರೆ.ಸುಚೇತನ ಸಹೋದರಿ ಸುಷ್ಟಿತಾ ಸಹ ಟೇಬಲ್ ಟೆನಿಸ್ ಆಟಗಾರ್ತಿ. ಪುತ್ರನ ಸಾಧನೆಗೆ ತಂದೆ-ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಫೆಬ್ರುವರಿ 26ರಿಂದ ಮಾರ್ಚ್ 1ರ ವರೆಗೆ ಗುಜರಾತ್‌ನಲ್ಲಿ ಆಯೋಜಿಸಿದ್ದ ವರ್ಲ್ಡ್ ಟೇಬಲ್ ಟೆನಿಸ್ ಕಂಟೆಂಡರ್ ಸ್ಪರ್ಧೆಯ 11 ವಯೋಮಿತಿ ಬಾಲಕರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಶ್ರೀಲಂಕಾದ ತಾವಿ ಸಮರವೀರ ವಿರುದ್ಧ ಸೆಣಸಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡಿದ್ದನು. ಹೀಗೆ ಒಂದೇ ವರ್ಷದಲ್ಲಿ ಎರಡು ಕಂಚಿನ ಪದಕ ಪಡೆದು ಸಾಧನೆ ತೋರಿದ್ದಾನೆ.
ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದಿರುವುದು ಖುಷಿ ತಂದಿದೆ. ಮುಂದೆ ಬ್ಯಾಂಕಾಕ್‌ನಲ್ಲಿ ಆಯೋಜಿಸಿರುವ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೇನೆ ಎಂದು ಸುಚೇತ್ ಧರೆಣ್ಣವರ ಹೇಳಿದರು.