ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದ ಇಬ್ಬರನ್ನು ಗ್ರಾಮಸ್ಥರೆ ಹಿಡಿದು ತಲೆ ಬೋಳಿಸಿ, ಥಳಿಸಿದ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?:ಜ. 9ರಂದು ಆರೋಪಿಗಳು ಆಟೋದಲ್ಲಿ ಮಹಿಳೆಯನ್ನು ಹೆಗ್ಗೇರಿ ಮೈದಾನ ಬಳಿ ಕರೆದ್ಯೊಯ್ದು ಆಕೆಗೆ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿ ಆ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಚಿತ್ರೀಕರಿಸಿದ ವಿಡಿಯೋಗಳನ್ನು ವಾಟ್ಸ್‌ಆ್ಯಪ್ ಗ್ರುಪ್‌ನಲ್ಲಿ ಪ್ರದೀಪ ಎಂಬಾತ ಶೇರ್ ಮಾಡಿದ್ದಾನೆ.
ಈ ಘಟನೆ ನಡೆದ ಬಳಿಕ ಆರೋಪಿಗಳು ಠಾಣೆಗೆ ಹೋಗಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಶಿವಶಂಕರ ಕಾಲನಿಯ ಪ್ರಮುಖರು ಸೇರಿದಂತೆ 40 ಜನರ ವಿರುದ್ಧ ದೂರು ನೀಡಿದ್ದಾರೆ. ಆಗ ಪೊಲೀಸರು ಪ್ರಮುಖರನ್ನು ಕರೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಮಹಿಳೆ ಮೇಲೆ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದರು.
ಇದಕ್ಕೂ ಪೂರ್ವದಲ್ಲಿ ವಿಷಯ ತಿಳಿದಿದ್ದ ಶಿವಶಂಕರ ಕಾಲನಿಯ ಮುಖಂಡರು ಹಾಗೂ ಸ್ಥಳೀಯರು ಆರೋಪಿಗಳನ್ನು ಕರೆಯಿಸಿ ಥಳಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಶಿವಾನಂದ ಹಲ್ಲೆ ನಡೆಸಿದ ಸಮುದಾಯದ ಮುಖಂಡರು ಸೇರಿದಂತೆ 40 ಜನರ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ಕ್ರಮವಹಿಸಲಾಗಿದೆ ಎಂದು ಕಮಿಷನರ್ ಎನ್. ಶಶಿಕುಮಾರ ತಿಳಿಸಿದರು.ಅತ್ಯಾಚಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ
ಅತ್ಯಾಚಾರಕ್ಕೆ ಒಳಗಾದ ಮಹಿಳೆ ಹಾವೇರಿ ಮೂಲದವಳು. ತನ್ನ ಪತಿಯೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಬಂದು ಹುಬ್ಬಳ್ಳಿಯ ಮಠ, ದೇವಸ್ಥಾನ, ಬಸ್ ನಿಲ್ದಾಣದಲ್ಲಿ ಮಲಗಿಕೊಂಡು ಜೀವನ ಸಾಗಿಸುತ್ತಿದ್ದಳು. ಆಕೆಯ ಪತಿಯು ಒಂದು ಪ್ರಕರಣದಲ್ಲಿ ಆರೋಪಿಯಾಗಿ ಶಿವಮೊಗ್ಗ ಜೈಲು ಸೇರಿದ್ದಾನೆ. ಈ ಮಹಿಳೆಯು ನಿತ್ಯ ಮಠದಲ್ಲಿಯೇ ಊಟ, ತಿಂಡಿ ಮಾಡಿಕೊಂಡು ಮಠದ ಸುತ್ತಲಿನ ಪ್ರದೇಶದಲ್ಲಿ ಓಡಾಡಿಕೊಂಡಿದ್ದಳು. ಇದನ್ನು ಗಮನಿಸಿದ ಆರೋಪಿಗಳು ಆಕೆಗೆ ಊಟ ಕೊಡುವ ನೆಪದಲ್ಲಿ ಪುಸಲಾಯಿಸಿ ಆಟೋದಲ್ಲಿ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.