ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋಗುತ್ತಿದ್ದ ಬಸ್ ಅಡ್ಡಗಟ್ಟಿದ ಗ್ರಾಮಸ್ಥರು: ಚಾಲಕನಿಗೆ ತರಾಟೆ

KannadaprabhaNewsNetwork |  
Published : Jan 24, 2025, 12:45 AM IST
23ಕೆಎಂಎನ್ ಡಿ28 | Kannada Prabha

ಸಾರಾಂಶ

ಬಸ್ ನಿಲ್ದಾಣದಲ್ಲಿ ಕೆ.ಆರ್‌.ಪೇಟೆ ಹಾಗೂ ಮೈಸೂರು ಮಾರ್ಗವಾಗಿ ನಿತ್ಯ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕರು ವಾಹನಗಳನ್ನು ನಿಲ್ಲಿಸದೇ ಹೋಗುತ್ತಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಬೇಸತ್ತ ಪ್ರಯಾಣಿಕರು ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಾರಿಗೆ ಬಸ್‌ನಲ್ಲಿ ಸೀಟು ಖಾಲಿ ಇದ್ದರೂ ನಿಗಧಿತ ಸ್ಥಳದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ಹೋಗುತ್ತಿದ್ದ ಬಸ್ಸನ್ನು ಗ್ರಾಮಸ್ಥರು ಅಡ್ಡಗಟ್ಟಿ ನಿಲ್ಲಿಸಿ ಚಾಲಕನಿಗೆ ತರಾಟೆ ತೆಗೆದುಕೊಂಡ ಘಟನೆ ತಾಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಬಸ್ ನಿಲ್ದಾಣದಲ್ಲಿ ಕೆ.ಆರ್‌.ಪೇಟೆ ಹಾಗೂ ಮೈಸೂರು ಮಾರ್ಗವಾಗಿ ನಿತ್ಯ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕರು ವಾಹನಗಳನ್ನು ನಿಲ್ಲಿಸದೇ ಹೋಗುತ್ತಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಬೇಸತ್ತ ಪ್ರಯಾಣಿಕರು ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಪ್ರತಿ ನಿತ್ಯ ಮೈಸೂರಿನಿಂದ ಕೆ.ಆರ್.ಪೇಟೆ, ಕೆ.ಆರ್.ಪೇಟೆಯಿಂದ-ಮೈಸೂರಿಗೆ ಹಾಗೂ ಮೈಸೂರು-ಪಂಪ್ ಹೌಸ್, ಕೆಆರ್‌ಎಸ್ ಮಾರ್ಗವಾಗಿ ಹೋಗುವ ಸಾರಿಗೆ ಬಸ್ ಚಾಲಕರು ಬಸ್ ಖಾಲಿ ಇದ್ದರೂ ಬೆಳಗೊಳ ಗ್ರಾಮದಲ್ಲಿನ ನಿಗದಿತ ಸ್ಥಳದಲ್ಲಿ ಬಸ್ ನಿಲುಗಡೆ ಮಾಡದೆ, ಜೊತೆಗೆ ಪ್ರಯಾಣಿಕರು ಕೈ ತೋರಿದರೂ ವಾಹನ ನಿಲ್ಲಿಸದೆ ಹೋಗುತ್ತಿದ್ದರು.

ಇದರಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ತಮ್ಮ ಕೆಲಸಗಳಿಗೆ ಸರಿಯಾದ ಸಮಯಕ್ಕೆ ಹೋಗಲು ತುಂಬಾ ತೊಂದರೆಯಾಗುತ್ತಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಬಸ್ ಅಡ್ಡಗಟ್ಟಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು.

ಗುರುವಾರ ಬೆಳಗ್ಗೆ 6.40ಕ್ಕೆ ಬೆಳಗೊಳ ಬಸ್ ನಿಲ್ದಾಣದ ಬಳಿ ಮೈಸೂರಿಗೆ ತೆರಳಲು ಕಾಯ್ದು ನಿಂತಿದ್ದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರನ್ನು ಕೆಆರ್‌ಪೇಟೆ- ಮೈಸೂರು ಮಾರ್ಗವಾಗಿ ಬಂದ ಸಾರಿಗೆ ಬಸ್ ಚಾಲಕ ಕೈ ಅಡ್ಡಗಟ್ಟಿದರೂ ಬಸ್ ನಿಲ್ಲಿಸದೆ ಹೋಗಿದ್ದಾನೆ. ಈ ವೇಳೆ ಸ್ಥಳೀಯರು ಸ್ಕೂಟರ್ ಮೂಲಕ ತೆರಳಿ ಬಸ್ ಅಡ್ಡಗಟ್ಟಿ ನಿಗದಿತ ಸ್ಥಳ ನಿಲ್ಲಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಬಸ್ ಚಾಲಕ ಬ್ರೇಕ್ ಹಿಡಿಯಲಿಲ್ಲ ಎಂದು ಸಬೂಬ್ ಹೇಳುತ್ತಿದ್ದಂತೆ ಗ್ರಾಮಸ್ಥರು ಚಾಲಕ ಹಾಗೂ ನಿರ್ವಾಹಕನಿಗೆ ತರಾಟೆ ತೆಗೆದುಕೊಂಡು ನಿಯಂತ್ರಣಾಧಿಕಾರಿಗೆ ಕರೆ ಮಾಡಿ ದೂರಿದ್ದಾರೆ. ಈ ವೇಳೆ ಮತ್ತೊಂದು ಬಸ್‌ನ ಚಾಲಕ ಕೂಡ ಬಸ್ ನಿಲ್ಲಿಸದೆ, ಸಮಯವಿಲ್ಲ ಎಂದು ಹೋಗುತ್ತಿದ್ದ ಆ ಬಸ್ ಅನ್ನು ಸಹ ಅಡ್ಡಗಟ್ಟಿದ್ದಾರೆ.

ಸ್ಥಳಕ್ಕೆ ಕೆಆರ್‌ಎಸ್ ಪೊಲೀಸರು ಆಗಮಿಸಿ ಚಾಲಕರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಸ್ ಚಾಲಕರ ವಿರುದ್ಧ ನಿಯಂತ್ರಣಾಧಿಕಾರಿ ಕುಮಾರ್ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿಯಂತ್ರಣಾಧಿಕಾರಿ ಕುಮಾರ್ ದೂರವಾಣಿ ಮೂಲಕ ಮಾತನಾಡಿ, ಗ್ರಾಮಸ್ಥರು ಬಸ್ ನಂಬರ್ ಸಹಿತಿ ದೂರು ನೀಡಿ ಉದ್ದಟತನ ತೋರಿರುವ ಚಾಲಕರ ವಿರುದ್ಧ ಕ್ರಮಕೈಗೊಳ್ಳುತ್ತೇನೆ. ಜೊತೆಗೆ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಗ್ರಾಮಸ್ಥರು ಹಾಗೂ ಪೊಲೀಸರಿಗೆ ಸಮಾಧಾನಪಡಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?