ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮದ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ನಡೆಯುತ್ತಿದೆ. ಕುಡಿತದ ಚಟಕ್ಕೆ ಬಿದ್ದು ಹಲವು ಕುಟುಂಬಗಳು ಬೀದಿ ಪಾಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವಂತೆ ತಾಲೂಕಿನ ಚೌಡಸಮುದ್ರ ಗ್ರಾಮಸ್ಥರು ತಾಲೂಕು ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು.ಗ್ರಾಮದಲ್ಲಿ ಮದ್ಯ ಮಾರಾಟನೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿ, ವ್ಯಕ್ತಿಯೊಬ್ಬ ಬಹಿರಂಗವಾಗಿಯೇ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದರಿಂದ ಕಡಿತದ ಚಟಕ್ಕೆ ಕೆಲ ಜನರು ಹಾಗೂ ಯುವಕರು ದಾಸರಾಗಿ ಪ್ರತಿನಿತ್ಯವೂ ಗ್ರಾಮದಲ್ಲಿ ಗಲಾಟೆ ಗದ್ದಲಗಳಿಗೆ ಕಾರಣರಾಗುತ್ತಿದ್ದಾರೆ ಎಂದು ದೂರಿದರು.
ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಅಕ್ರಮ ಮದ್ಯ ಮಾರಾಟ ಮಾಡದಂತೆ ಪಂಚಾಯ್ತಿ ಹಾಗೂ ತಾಲೂಕು ಅಬಕಾರಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಕ್ರಮ ವಹಿಸಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಮದ್ಯ ಮಾರಾಟ ನಡೆಯುತ್ತಿದೆ ಎಂದು ಆರೋಪಿಸಿದರು.ತಾಲೂಕಿನಲ್ಲಿ ಅಕ್ರಮ ಗಾಂಜಾ ಬೆಳೆಯುವ ಮತ್ತು ಮಾರಾಟ ಮಾಡುವ ದಂಧೆ ಹೆಚ್ಚಳವಾಗಿದೆ. ತಾಲೂಕಿನ ಕಾಶಿ ಮುರುಕನಹಳ್ಳಿ ಬಳಿ ಅಕ್ರಮವಾಗಿ ಗಾಂಜಾ ಬೆಳೆದಿರುವುದು, ಪಟ್ಟಣದ ಹೊರವಲಯದಲ್ಲಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಜಿಲ್ಲಾ ಮಟ್ಟದ ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ವಹಿಸಿದ್ದರು. ಆದರೆ, ತಾಲೂಕು ಅಬಕಾರಿ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ದೂರಿದರು.
ಗ್ರಾಮಸ್ಥರು ಕೂಡಲೇ ಅಬಕಾರಿ ಅಧಿಕಾರಿಗಳು ಹಾಗೂ ಪೊಲೀಸರು ಗ್ರಾಮಕ್ಕೆ ಆಗಮಿಸಿ ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವ ಜೊತೆಗೆ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಗ್ರಾಮ ಮುಖಂಡರಾದ ಕಂಡಕ್ಟರ್ ಶಿವಮೂರ್ತಿ, ರೇವಣ್ಣ, ಚಂದ್ರು, ಗೀತಾ ಮತ್ತಿತರರು ಮಾತನಾಡಿ, ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು.
ಈ ವೇಳೆ ಗ್ರಾಪಂ ಸದಸ್ಯ ಶಿವಕುಮಾರ್, ಬಿ.ಎಸ್.ಕುಮಾರಿ, ಶಿವಣ್ಣ, ಟೈಲರ್ ಲೋಕೇಶ್, ರಾಜಣ್ಣ, ಪುಟ್ಟರಾಜು, ರವಿ, ಅಣ್ಣಯ್ಯಣ್ಣ, ಮಹೇಶ್, ಮಂಜುನಾಥ್, ರತ್ನಮ್ಮ, ಅಕ್ಕಯಮ್ಮ, ಮಧು, ಸೇರಿದಂತೆ ಹಲವು ಗ್ರಾಮಸ್ಥರು ಇದ್ದರು.