ರಾಮನಗರ: ಶಾಲಾ-ಕಾಲೇಜು ವಿದ್ಯಾರ್ಥಿಗಳ ಓಡಾಟ, ಗ್ರಾಪಂ, ದೇವಾಲಯಕ್ಕೆ ಬರುವ ಭಕ್ತಾದಿಗಳು ಹಾಗೂ ಗ್ರಾಮಗಳನ್ನು ಸಂಪರ್ಕಿಸುವ ಬಿಡದಿ ಹೋಬಳಿ ಹನುಮಂತನಗರದ ಕೋತಿ ಆಂಜನೇಯ ದೇವಾಲಯದ ಬಳಿಯ ಸ್ಕೈವಾಕ್ ನ ಉಳಿದಿರುವ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಎಚ್ .ಎಸ್. ಯೋಗಾನಂದ ಗ್ರಾಮಸ್ಥರ ಪರವಾಗಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಕೋತಿ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ಸ್ಕೈವಾಕ್ ನಿರ್ಮಾಣ ಹಂತದಲ್ಲಿದ್ದು, ಶೇ.90ರಷ್ಟು ಕೆಲಸ ಪೂರ್ಣವಾಗಿದ್ದು, ಉಳಿದಿರುವ ಶೇ.10ರಷ್ಟು ಕೆಲಸ ಬಾಕಿ ಉಳಿದಿದೆ. ಸ್ಕೈ ವಾಕ್ ವಿಚಾರವಾಗಿ ಕೆಲವರು ರಾಜಕಾರಣ ಮಾಡುತ್ತ, ಕೆಲವು ಪ್ರಭಾವಿಗಳು ಸ್ಕೈ ವಾಕ್ ಕೆಲಸ ಅಪೂರ್ಣವಾಗಿದೆ. ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ್ಕೈವಾಕ್ ಕೆಲಸ ಮಾಡಿಸಲು ಹಿಂದಿನಿಂದಲೂ ವೀರಾಂಜನೇಯಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ಹಲವು ತೊಂದರೆಗಳನ್ನು ನೀಡುತ್ತಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದೆ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಕೊಟ್ಟ ಮಾತಿನಂತೆ ಜನರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.
ಹಲವು ವರ್ಷದ ಹೋರಾಟದ ಫಲವಾಗಿ ಗ್ರಾಮಗಳ ಸಂಪರ್ಕ ಕಲ್ಪಿಸಲು ನಾನು ಗ್ರಾಪಂ ಸದಸ್ಯನಾಗಿದ್ದ ಸಮಯದಲ್ಲಿ ಜಿಲ್ಲಾಡಳಿತ, ಪೋಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿತ್ತು. ಅದರಂತೆ ಸ್ಕೈ ವಾಕರ್ ನಿರ್ಮಾಣ ಮಾಡುತ್ತಿರುವು ದರಿಂದ ಗ್ರಾಪಂಗೆ ಬರುವ ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಭಕ್ತಾಧಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.ವೀರಾಂಜನೇಯಸ್ವಾಮಿ ಟ್ರಸ್ಟ್ ತಡೆಯಾಜ್ಞೆಗೆ ಹೋಗಿದ್ದಾರೆಂಬ ಮಾಹಿತಿ ಇದೆ. ಇತ್ತೀಚೆಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಸಾರ್ವಜನಿಕರ ಮನವಿಗೆ ಸ್ಪಂದಿಸಿ ಸ್ಥಳ ಪರಿಶೀಲನೆ ನಡೆಸಿ ತ್ವರಿತವಾಗಿ ಕೆಲಸ ಮುಗಿಸಲು ಎನ್ ಎಚ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹನುಮಂತನಗರದಲ್ಲಿ ಬಾಲಕೃಷ್ಣ ಅವರ ಸೂಚನೆಯಂತೆ ಪಕ್ಷಾತೀತವಾಗಿ ಚುನಾಯಿತ ಪ್ರತಿನಿಧಿ ಗಳನ್ನು ಕರೆಸಿ ಉದ್ಘಾಟಿಸಲು ಸಿದ್ದತೆ ನಡೆದಿದೆ ಎಂದರು.
ಗ್ರಾಮದ ಮಹಿಳೆ ಮಂಜುಳಾ ಮಾತನಾಡಿ, ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ಅಪಘಾತದಲ್ಲಿ 19 ಜನ ಮರಣ ಹೊಂದಿದ್ದಾರೆ. ಸ್ಕೈವಾಕ್ ನಿರ್ಮಾಣ ಮಾಡಿರುವ ಸ್ಥಳ ಸರ್ಕಾರದ ಜಾಗವಾಗಿದೆ. ಅದು ಟ್ರಸ್ಟಿನ ಸ್ವಂತ ಜಾಗವಲ್ಲ, ಜನರಿಗೆ ತೊಂದರೆ ಕೊಡಲು ಸ್ಟೇ ತಂದಿರೋದು ಯಾವ ನ್ಯಾಯ, ಕೂಡಲೇ ಉಳಿದಿರುವ ಕೆಲಸ ಮುಗಿಸಿ ಓಡಾಡಲು ಮುಕ್ತಗೊಳಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಬ್ಯಾಟಣ್ಣ, ಇಂದ್ರಮ್ಮ, ಭಾಗ್ಯಮ್ಮ, ನಾರಾಯಣ, ಪಾರ್ವತ್ತಮ್ಮ, ಶಿವರಾಮಣ್ಣ, ರಾಮಣ್ಣ, ಮಹದೇವ, ಮಂಜು, ನಾರಾಯಣಸ್ವಾಮಿ ಮತ್ತಿತರರಿದ್ದರು.
8ಕೆಆರ್ ಎಂಎನ್ 5.ಜೆಪಿಜಿಬಿಡದಿ ಹೋಬಳಿ ಹನುಮಂತನಗರದಲ್ಲಿ ಗ್ರಾಪಂ ಮಾಜಿ ಸದಸ್ಯ ಎಚ್ .ಎಸ್.ಯೋಗಾನಂದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.