ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮಕ್ಕೆ ಸೇರಿದ ಗಂಗಸಕಟ್ಟೆ (ಗೋಕಟ್ಟೆ) ಉಳಿವಿಗಾಗಿ ತಾಲೂಕು ಪಂಚಾಯತಿ ಮುಂದೆ ಬಿದರಿ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರುಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ನಮ್ಮ ಊರಿನ ಹಸು, ಎಮ್ಮೆ, ಕುರಿ, ಮೇಕೆ ಹಾಗೂ ಅನೇಕ ಸಾಕುಪ್ರಾಣಿಗಳ ಸಂಕುಲಕ್ಕೆ ನೆರವಾಗಲೆಂದು ಹಿಂದಿನಿಂದಲೂ ಗಂಗಸಟ್ಟೆ (ಗೋಕಟ್ಟೆ) ಎಂದು ಉಳಿಸಿಕೊಂಡು ಬಂದಿರುತ್ತೇವೆ.ಗುಬ್ಬಿ ತಾಲೂಕಿನ ಎಲ್ಲಾ ಕೆರೆ-ಕಟ್ಟೆಗಳು ಗುಂಡು-ದೋಪುಗಳು ಸಾರ್ವಜನಿಕ ವಲಯಕ್ಕೆ ಮೀಸಲಿಟ್ಟಿರುವ ಭೂಮಿಗಳು ನಮ್ಮ ತಾಲೂಕಿನಲ್ಲಿ ಒತ್ತುವರಿಯಾಗಿದ್ದರೂ ಕೂಡ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದೆ. ಬಿದರೆ ಪಿ.ಡಿ.ಒ ಈ ಜಾಗದ ಬಗ್ಗೆ ಮಣ್ಣನ್ನು ತೆರವು ಮಾಡಲು ಗ್ರಾಮಸ್ಥರು ಕೊಟ್ಟ ಮನವಿಗೆ ಯಾವುದೇ ರೀತಿ ಸ್ಪಂದಿಸದೆ ನಿರ್ಲಕ್ಷ್ಯತನ ತೋರಿರುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಬಿದರೆ ಗ್ರಾಮ ಪಿಡಿಒ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಈ ಗಂಗಸ ಕಟ್ಟೆ (ಗೋಕಟ್ಟೆ) ಭೂಮಿಯನ್ನು ಸಾರ್ವಜನಿಕ ವಲಯಕ್ಕೆ ಉಳಿಸಿ ಜನಜಾನುವಾರು ಹಾಗೂ ಪ್ರಾಣಿ ಸಂಕುಲವನ್ನು ರಕ್ಷಿಸಿಕೊಡಬೇಕೆಂದು ಬಿದರೆ ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಗಳು ಹಾಗೂ ರೈತರು ಮತ್ತು ಜನಪ್ರತಿನಿಧಿಗಳು ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಆರತಿ ಬಿ ಅವರ ಮುಖೇನ ಮನವಿ ಸಲ್ಲಿಸಿದರು.ಇದೇ ವೇಳೆ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ ಜಿ ಲೋಕೇಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲೋಕೇಶ್, ಶಿವಕುಮಾರ್, ನಾಗರಾಜ್ ಸೇರಿದಂತೆ ಹಲವು ರೈತ ಮುಖಂಡರು ಬಿದರೆ ಗ್ರಾಮಸ್ಥರು ಉಪಸ್ಥಿತರಿದ್ದರು.