ತಾಲೂಕಿನ ಕಾಡವಾದ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿದಾರನ ಅನೂಚಿತ ವರ್ತನೆ ಹಾಗೂ ಪಡಿತರ ಚೀಟಿದಾರರಿಗೆ ಸೂಕ್ತ ಸಮಯಕ್ಕೆ ಆಹಾರ ಧಾನ್ಯ ವಿತರಿಸದಿರುವುದನ್ನು ಖಂಡಿಸಿ, ಗ್ರಾಮಸ್ಥರು ಬುಧವಾರ ಗ್ರಾಮದ ಮನ್ನಾಎಖ್ಖೆಳಿ-ಬೀದರ್ ಮಾರ್ಗದ ಬಸವೇಶ್ವರ ಕಮಾನಿನ ಬಳಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭವಾರ್ತೆ ಬೀದರ್
ತಾಲೂಕಿನ ಕಾಡವಾದ ಗ್ರಾಮದಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿದಾರನ ಅನೂಚಿತ ವರ್ತನೆ ಹಾಗೂ ಪಡಿತರ ಚೀಟಿದಾರರಿಗೆ ಸೂಕ್ತ ಸಮಯಕ್ಕೆ ಆಹಾರ ಧಾನ್ಯ ವಿತರಿಸದಿರುವುದನ್ನು ಖಂಡಿಸಿ, ಗ್ರಾಮಸ್ಥರು ಬುಧವಾರ ಗ್ರಾಮದ ಮನ್ನಾಎಖ್ಖೆಳಿ-ಬೀದರ್ ಮಾರ್ಗದ ಬಸವೇಶ್ವರ ಕಮಾನಿನ ಬಳಿ ಬೃಹತ್ ರಸ್ತೆ ತಡೆ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳೆಯರು, ವಯೋವೃದ್ಧರು ಮತ್ತು ವಿಕಲಚೇತನರು, ಪಡಿತರ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದರು. ಪ್ರತಿ ತಿಂಗಳು ಬಯೋಮೆಟ್ರಿಕ್ ನೀಡಲು ಮುರ್ನಾಲ್ಕು ದಿನ ಸಾಲಿನಲ್ಲಿ ನಿಂತು ಕೆಲಸ-ಕಾರ್ಯ ಬಿಟ್ಟು ಪರದಾಡುವಂತಾಗಿದೆ. ಅಧಿಕಾರಿಗಳು ಈ ಕೂಡಲೇ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ರದ್ದುಗೊಳಿಸಿ, ಪಿಕೆಪಿಎಸ್ ಮೂಲಕ ಪಡಿತರ ಧಾನ್ಯ ವಿತರಣೆ ಮಾಡಬೇಕೆಂದು ಒತ್ತಾಯಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರಲ್ಲದೆ ಪಿಕೆಪಿಎಸ್ ಅಧ್ಯಕ್ಷ ರಾಜಕುಮಾರ ಮಂಗಲಗಿ, ಯುವ ಮುಖಂಡರಾದ ದಯಾನಂದ ಪಾಟೀಲ್, ದತ್ತಾತ್ರಿ ಬುಕೆಗಾರ ಹಾಗೂ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರು ಈಗಾಗಲೇ ಈ ಸಂಬಂಧ ಬಂದಿದ್ದ ದೂರಿನ ಆಧಾರದ ಮೇಲೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ವರದಿ ಬಂದ ತಕ್ಷಣ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಡಿತರ ವಿತರಣೆಗೆ ಶೀಘ್ರವೇ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರದ ನಿಯಮಗಳ ಬಗ್ಗೆ ವಿವರಿಸಿದ ಅವರು, ನ್ಯಾಯಬೆಲೆ ಅಂಗಡಿಗೆ ಮಂಗಳವಾರ ಮಾತ್ರ ರಜೆ ಇರಬೇಕು. ಪ್ರತಿ ದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ಹಾಗೂ ಸಾಯಂಕಾಲ 5 ರಿಂದ ರಾತ್ರಿ 8 ಗಂಟೆಯ ಅವಧಿಯಲ್ಲಿ ಬಯೋಮೆಟ್ರಿಕ್ ಪಡೆದು ತಕ್ಷಣವೇ ಆಹಾರ ಧಾನ್ಯ ವಿತರಿಸಬೇಕು. ಪಡಿತರ ಹೊರತುಪಡಿಸಿ ಬೇರೆ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಹಿಂಪಡೆದರು. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಬಗದಲ್ ಪೊಲೀಸ್ ಠಾಣೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.