ಯಲ್ಲಾಪುರ: ಪಟ್ಟಣದ ಸುತ್ತ ವರ್ತುಲ ರಸ್ತೆ ನಿರ್ಮಾಣದ ಕುರಿತು ಸರ್ಕಾರ ಹೊರಡಿಸಿದ ಆದೇಶವನ್ನು ವಿರೋಧಿಸಿ ಆನಗೋಡ ಗ್ರಾಪಂ ವ್ಯಾಪ್ತಿಯ ಬಾಳಗಿಮನೆ, ಶೀಗೆಪಾಲ, ತಟಗಾರ, ಶಿಸ್ತಮುಡಿ ಗ್ರಾಮಸ್ಥರು ಶಿರಸಿಯ ನಗರ ಹಾಗೂ ಗ್ರಾಮಾಂತರ ಯೋಜನೆ ಇಲಾಖೆಯ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಯಲ್ಲಾಪುರ ಪಟ್ಟಣಕ್ಕೆ ವರ್ತುಲ ರಸ್ತೆಯ ಅಗತ್ಯವಿಲ್ಲ. ಇರುವ ಹೆದ್ದಾರಿಯನ್ನೇ ಅಗಲೀಕರಣ ಮಾಡಬೇಕು. ಅರಣ್ಯ ಪ್ರದೇಶಗಳಿಂದಲೇ ಸುತ್ತುವರಿದ ಪಟ್ಟಣದಲ್ಲಿ ಕಂದಾಯ ಭೂಮಿ ಹೆಚ್ಚಾಗಿ ಇಲ್ಲದಿರುವುದರಿಂದ ಪಟ್ಟಣದ ವಿಸ್ತರಣೆ ಅಸಾಧ್ಯ ಎಂದು ವಿವರಿಸಲಾಗಿದೆ.
ಈಗಾಗಲೇ ಪಟ್ಟಣ ಹಾಗೂ ಗ್ರಾಮೀಣ ಭಾಗಗಳನ್ನು ಬೆಸೆಯುವ ರಸ್ತೆಗಳು ಹಿಂದಿನಿಂದಲೂ ಇವೆ. ತಟಗಾರ ಕ್ರಾಸ್ನಿಂದ ನಿಸರ್ಗಮನೆ ಮೂಲಕ ಆನಗೋಡ ರಸ್ತೆಗೆ ತಲುಪಿ, ಕಣ್ಣಿಗೇರಿಯ ಮೂಲಕ ಹುಬ್ಬಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಿದೆ. ಮಾಗೋಡ ರಸ್ತೆಯಿಂದ ಉಪಳೇಶ್ವರ, ಉಪಳೇಶ್ವರದಿಂದ ಹುತ್ಕಂಡ ಮೂಲಕ ಮುಂಡಗೋಡ ರಸ್ತೆ, ಅಲ್ಲಿಂದ ಲಿಂಗ್ಯಾನಕೊಪ್ಪದ ಮೂಲಕ ಹುಬ್ಬಳ್ಳಿ ರಸ್ತೆಗೆ ಕೂಡುವ ರಸ್ತೆ ಇದೆ.ಇರುವ ಸಂಪರ್ಕ ರಸ್ತೆಗಳನ್ನೇ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ. ಇದರಿಂದ ಕೃಷಿ ಜಮೀನಿಗೂ ತೊಂದರೆಯಾಗುವುದಿಲ್ಲ. ರೈತರ ಹಿತದೃಷ್ಟಿಯಿಂದ ಪ್ರಸ್ತಾಪಿತ ಯೋಜನೆ ಸ್ಥಗಿತಗೊಳಿಸಿ, ಇರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರಾದ ಆರ್.ಎಸ್. ಭಾಗ್ವತ ಶೀಗೆಪಾಲ, ಆರ್.ಕೆ. ಭಟ್ಟ ಶೀಗೆಪಾಲ, ನರಸಿಂಹ ಭಟ್ಟ ಬೋಳಪಾಲ, ಕೆ.ಟಿ. ಹೆಗಡೆ, ಎನ್.ಕೆ. ಭಟ್ಟ ಶೀಗೆಪಾಲ, ಮಂಜುನಾಥ ಭಟ್ಟ ಕೊಂಬೆಪಾಲ, ಗೋಪಾಲಕೃಷ್ಣ ಗಾಂವ್ಕರ ಹರಕನಪಾಲ, ನಾಗೇಶ ಭಟ್ಟ, ನಾರಾಯಣ ಭಟ್ಟ ಮೊಳೆಮನೆ, ಕೃಷ್ಣ ಭಟ್ಟ ಬದನೆಪಾಲ, ಮಂಜುನಾಥ ಭಟ್ಟ ಬದನೆಪಾಲ, ಜಿ.ಟಿ. ಭಟ್ಟ, ವಿಶ್ವನಾಥ ಭಟ್ಟ ಕರಿಪಾಲ, ಕೃಷ್ಣ ಭಟ್ಟ ಗುಡೆಪಾಲ, ನಾಗೇಶ ಭಟ್ಟ, ವೆಂಕಟರಮಣ ಭಟ್ಟ ಮಾವಿನಗದ್ದೆ ಉಪಸ್ಥಿತರಿದ್ದರು.