ಚೆನ್ನಕೊಪ್ಪದಲ್ಲಿ ಟೋಲ್ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ

KannadaprabhaNewsNetwork |  
Published : Oct 26, 2024, 01:02 AM IST
ಫೋಟೋ 25 ಎ, ಎನ್, ಪಿ 1 ಆನಂದಪುರ  ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ  ರಾಷ್ಟ್ರೀಯ ಹೆದ್ದಾರಿಯವರು   ಟೋಲ್  ನಿರ್ಮಾಣ ವನ್ನು  ವಿರೋಧಿಸಿ  ರೈತರು ಆಚಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಆನಂದಪುರ ಸಮೀಪದ ಚೆನ್ನಕೊಪ್ಪ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯವರು ಟೋಲ್ ನಿರ್ಮಾಣ ವಿರೋಧಿಸಿ ರೈತರು ಆಚಾಪುರ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಆನಂದಪುರ:

ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 69ರ ಚೆನ್ನಕೊಪ್ಪದಲ್ಲಿ ಟೋಲ್ ನಿರ್ಮಾಣಕ್ಕೆ ಗ್ರಾಮಸ್ಥರು ಹಾಗೂ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಆಚಾಪುರ ಗ್ರಾಮದ ಮೂಲಕ ಹಾದು ಹೋಗಲಿರುವ ರಾಷ್ಟ್ರೀಯ ಹೆದ್ದಾರಿ 69ಕ್ಕೆ ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದ್ದು. ಈ ಭಾಗದ ರೈತರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಯಾವುದೇ ತಕರಾರು ಮಾಡದೆ ಭೂಮಿ ಬಿಟ್ಟು ಬಿಟ್ಟುಕೊಡುತ್ತಿದ್ದೇವೆ. ಆದರೆ ಈಗ ಗಿಳಾಲಗುಂಡಿಯಿಂದ ಚೆನ್ನಕೊಪ್ಪ ಗ್ರಾಮದಲ್ಲಿ ಹೆದ್ದಾರಿಯವರು ಟೋಲ್ ನಿರ್ಮಿಸುವ ಹುನ್ನಾರ ನಡೆಸುತ್ತಿರುವುದನ್ನು ತಿಳಿದು ಗ್ರಾಮಸ್ಥರು ಯಾವುದೇ ಕಾರಣಕ್ಕೂ ಚೆನ್ನಕೊಪ್ಪದಲ್ಲಿ ಟೋಲ್ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂದು ಆಚಾಪುರ ಗ್ರಾಮ ಪಂಚಾಯಿತಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

ಈ ವೇಳೆ ಸ್ಥಳೀಯ ಕೃಷಿಕೆ ನೇತ್ರಾ ರಮೇಶ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ನಾವು ಭೂಮಿಯನ್ನು ನೀಡುತ್ತಿದ್ದೆವೆ. ಆದರೆ ಮತ್ತೆ ಟೋಲ್ ನಿರ್ಮಾಣ ಮಾಡಿದರೆ ನಾವು ನಮ್ಮ ಭೂಮಿಯನ್ನು ಕಳೆದುಕೊಂಡು ಎಲ್ಲಿ ಹೋಗಬೇಕು ಎಂಬ ಪ್ರಶ್ನೆ ಕಾಡುತ್ತಿದೆ. ಹೆದ್ದಾರಿ ಪ್ರಾಧಿಕಾರದವರು ಕಂದಾಯ ಅಥವಾ ಅರಣ್ಯ ಭೂಮಿಯಲ್ಲಿ ಟೋಲ್ ನಿರ್ಮಾಣ ಮಾಡುವುದು ಸೂಕ್ತ. ಈ ವಿಚಾರವಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಹಾಗೂ ರಾಜಕಾರಣಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ರೈತ ಶಿವಕುಮಾರ್ ಮಾತನಾಡಿ, ಚನ್ನಕೊಪ್ಪ ಗ್ರಾಮದಲ್ಲಿ ನೂರಾರು ವರ್ಷಗಳಿಂದ ತುಂಡು ಭೂಮಿಯಲ್ಲಿ ಜೀವನ ನಡೆಸುತ್ತಿರುವ ರೈತರು ಭೂಮಿಯನ್ನು ಕಳೆದುಕೊಂಡು ಹೇಗೆ ಬದುಕಲು ಸಾಧ್ಯ. ಅಲ್ಲದೆ ಈ ಭಾಗದಲ್ಲಿ ನೂರಾರು ಕುಟುಂಬಗಳು 5-6 ದಶಕಗಳಿಂದ ಬದುಕು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇಲ್ಲಿ ಟೋಲ್ ನಿರ್ಮಾಣ ಮಾಡಿದರೆ ಗ್ರಾಮಸ್ಥರು ಇರುವಂತಹ ವಾಸದ ಮನೆಯನ್ನು ಕಳೆದುಕೊಂಡು ಬೀದಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಆದರಿಂದ ರೈತರು ಹಾಗೂ ಗ್ರಾಮಸ್ಥರ ಹಿತ ದೃಷ್ಟಿಯಿಂದ ಈ ಭಾಗದಲ್ಲಿ ಟೋಲ್ ನಿರ್ಮಾಣ ಮಾಡುವ ಯೋಜನೆಯನ್ನು ಹೆದ್ದಾರಿ ಪ್ರಾಧಿಕಾರದವರು ಕೈಬಿಡಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯತ್‌ ಅಧ್ಯಕ್ಷ ಕಲೀಮುಲ್ಲಾ ಖಾನ್ ರೈತರ ಮನವಿ ಸ್ವೀಕರಿಸಿ ಮಾತನಾಡಿ, ರೈತರು ಸಾರ್ವಜನಿಕರು ನೀಡಿದಂತಹ ಮನವಿಗೆ ಗ್ರಾಮ ಆಡಳಿತ ಸ್ಪಂದಿಸಿ ಸಭೆಯಲ್ಲಿ ನಿರ್ಣಯಗೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯರಾದ, ಪ್ರಕಾಶ್ ತಂಗಳವಾಡಿ, ಪುಷ್ಪ, ರೈತರಾದ ರೋಹಿತ್, ರವಿ, ರಾಘವೇಂದ್ರ, ಚಂದ್ರಶೇಖರ್, ಶೇಖರ, ಸಚಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ