ತುಂಗಭದ್ರಾ ಸಕ್ಕರೆ ಕಾರ್ಖಾನೆ ಜಾಗ ಸರ್ವೆಗೆ ಗ್ರಾಮಸ್ಥರ ವಿರೋಧ

KannadaprabhaNewsNetwork | Published : Feb 3, 2024 1:46 AM

ಸಾರಾಂಶ

ಶಿವಮೊಗ್ಗದ ಮಲವಗೊಪ್ಪ ಗ್ರಾಮದಲ್ಲಿ ಶುಕ್ರವಾರ ಸರ್ವೆಗೆ ಮುಂದಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಆರ್‌ಐ ಮತ್ತು ವಿಎಒ ಸರ್ವೆ ಕಾರ್ಯ ನಿಲ್ಲಿಸಿದರು. ತುಂಗಭದ್ರ ಸಕ್ಕರೆ ಕಾರ್ಖನೆ ಜಾಗದ ವಿವಾದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್‌ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದರು. ಕಂದಾಯ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿ (ವಿಎಒ) ಸರ್ವೆ ಕಾರ್ಯ ಆರಂಭಿಸಿದ್ದರು. ಈ ವೇಳೆ ಸರ್ವೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇಲ್ಲಿನ ಮಲವಗೊಪ್ಪ ಗ್ರಾಮದಲ್ಲಿ ಶುಕ್ರವಾರ ಸರ್ವೆಗೆ ಮುಂದಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಆರ್‌ಐ ಮತ್ತು ವಿಎಒ ಸರ್ವೆ ಕಾರ್ಯ ನಿಲ್ಲಿಸಿದರು.

ತುಂಗಭದ್ರ ಸಕ್ಕರೆ ಕಾರ್ಖನೆ ಜಾಗದ ವಿವಾದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್‌ ಆದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆಗೆ ಮುಂದಾಗಿದ್ದರು. ಕಂದಾಯ ನಿರೀಕ್ಷಕ ಮತ್ತು ಗ್ರಾಮ ಆಡಳಿತಾಧಿಕಾರಿ (ವಿಎಒ) ಸರ್ವೆ ಕಾರ್ಯ ಆರಂಭಿಸಿದ್ದರು. ಈ ವೇಳೆ ಸರ್ವೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ಸ್ಥಳೀಯರ ಆಕ್ರೋಶ:

ನಾಲ್ಕೈದು ದಶಕದಿಂದ ವಾಸಿಸುತ್ತ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಜಾಗ ಈಗ ಸಕ್ಕರೆ ಕಾರ್ಖಾನೆಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಇದರ ಸರ್ವೆ ಕಾರ್ಯದ ಬಳಿಕ ತಮ್ಮನ್ನು ಒಕ್ಕಲೆಬ್ಬಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ವೆ ಕಾರ್ಯ ನಡೆಸಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಇದೇ ರೀತಿ ಪಿಳ್ಳಂಗಿರಿ, ಜಾವಳ್ಳಿ ಮೊದಲಾದ ಭಾಗಗಳಲ್ಲೂ ಸರ್ವೆಗೆ ಪೊಲೀಸರೊಂದಿಗೆ ತೆರಳಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಸರ್ವೆ ಕಾರ್ಯಕ್ಕೆ ಸ್ಥಳೀಯರ ವಿರೋಧದ ಹಿನ್ನೆಲೆ ಉಪವಿಭಾಗಾಧಿಕಾರಿ ಸತ್ಯನಾರಾಯಣ ಸ್ಥಳಕ್ಕೆ ಭೇಟಿ ನೀಡಿ, ಜನರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಆದರೆ, ಸರ್ವೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದರು.

ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸತ್ಯನಾರಾಯಣ ತಿಳಿಸಿದರು. ಅಲ್ಲದೆ ಸರ್ವೆ ಕಾರ್ಯ ಸ್ಥಗಿತಗೊಳಿಸಿದರು.

ತುಂಗಭದ್ರಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸುಮಾರು 2 ಸಾವಿರ ಎಕರೆ ಜಾಗ ಸ್ವಾಧೀನಕ್ಕೆ ಮುಂದಾಗಿದೆ. ಆದರೆ, ಈ ಜಾಗದಲ್ಲಿ ಜನ ವಾಸವಾಗಿದ್ದು, ಕೃಷಿ ಚಟುವಟಿಕೆಯಲ್ಲಿಯೂ ತೊಡಗಿದ್ದಾರೆ. ವಿದ್ಯುತ್‌, ನೀರಿನ ಸಂಪರ್ಕ ಪಡೆಯಲಾಗಿದೆ. ಆದ್ದರಿಂದ ಈ ಜಾಗ ತಮ್ಮದು ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಫೆ.12ರೊಳಗೆ ಸರ್ವೆ ಕಾರ್ಯ ನಡೆಸುವಂತೆ ಹೈಕೋರ್ಟ್‌ ಸೂಚಿಸಿತ್ತು.

- - - -2ಎಸ್ಎಂಜಿಕೆಪಿ10:

ಶಿವಮೊಗ್ಗದ ಹೊರವಲಯದ ಮಲವಗೊಪ್ಪದಲ್ಲಿ ಶುಕ್ರವಾರ ಸರ್ವೆಗೆ ಮುಂದಾಗಿದ್ದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

Share this article