ಗುಂಡಿ ಬಿದ್ದು ಕೆಸರು ಗದ್ದೆಯಂತಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork |  
Published : Aug 13, 2025, 12:30 AM IST
12ಕೆಎಂಎನ್ ಡಿ21 | Kannada Prabha

ಸಾರಾಂಶ

ಜನಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಬರ್ತಾರೆ, ಭರವಸೆ ನೀಡಿ ಮರೆತು ಬಿಡ್ತಾರೆ. ಮಳೆಯಿಂದಾಗಿ ರಸ್ತೆ ಕೆಸರು ಜಾರುತ್ತಿದೆ. ಜಮೀನಿಗೆ ಹೋಗಿ ಬರಲು ಸಾಧ್ಯವೇ ಆಗುತ್ತಿಲ್ಲ ಎಂದು ಸೈಕಲ್ ಸವಾರ ಮಹದೇವಪ್ಪ ನೋವು ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮಗಳು, ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಕೆಸರು ಗದ್ದೆಯಂತಾಗಿದೆ ಎಂದು ನಾಟಿ ಮಾಡಿ ಅಂತರವಳ್ಳಿ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸಮೀಪದ ಅಂತರವಳ್ಳಿ ಗ್ರಾಮದಿಂದ ಗೊಲ್ಲರದೊಡ್ಡಿ ಮೂಲಕ ಹೊಸಪುರಕ್ಕೆ ತಲುಪುವ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿದೆ. ಕೂಡಲೇ ಉತ್ತಮ ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಕೆಸರು ಗುಂಡಿಗಳಿಗೆ ಭತ್ತದ ಪೈರು ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥ ಡಾ.ನಾಗೇಶ್ ಮಾತನಾಡಿ, ಈ ರಸ್ತೆಗೆ ಹೊಂದಿಕೊಂಡಂತೆ ಸುಮಾರು 700 ಎಕರೆಗೂ ಹೆಚ್ಚು ಕೃಷಿ ಭೂಮಿ ಇದೆ. ಕೃಷಿ ಚಟುವಟಿಕೆಗಳಿಗೆ ನೂರಾರು ರೈತರು ಸುಮಾರು 3 ಕಿ.ಮೀ ದೂರವಿರುವ ಈ ರಸ್ತೆಯನ್ನು ಬಳಸುತ್ತಾರೆ. ಇತರೆ ಗ್ರಾಮಗಳಿಗೆ ಹೋಗುತ್ತಾರೆ. ಮಳೆ ಬಿದ್ದರೆ ಸಾಕು, ರಸ್ತೆಯ ತುಂಬಾ ಗುಂಡಿಯಂತಾಗಿ ನೀರು ತುಂಬಿಕೊಳ್ಳುತ್ತದೆ ಎಂದು ದೂರಿದರು.

ಮಳೆಗಾಲದಲ್ಲಿ ಪಾದಚಾರಿಗಳು ನಡೆದಾಡುವುದು ಆಸಾಧ್ಯ. ದ್ವಿಚಕ್ರ ವಾಹನ ಸವಾರರು ಹಿಪ್ಪುನೇರಳೆ ಸೊಪ್ಪು, ಹಸುಗಳಿಗೆ ಮೇವು ತರುವಾಗ ಅಯತಪ್ಪಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಉತ್ತಮ ರಸ್ತೆ ನಿರ್ಮಿಸಲು ಕ್ರಮವಹಿಸಬೇಕೆಂದು ಆಗ್ರಹಿಸಿದರು.

ಜಮೀನುಗಳಿಗೆ ಸುಮಾರು 40ಕ್ಕೂ ಹೆಚ್ಚು ವರ್ಷಗಳಿಂದಲೂ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದೇನೆ. ಹಲವು ಬಾರಿ ರಸ್ತೆ ನಿರ್ಮಿಸುವಂತೆ ಮನವಿ ನೀಡಿದರೂ ಇದುವರೆಗೂ ಈ ರಸ್ತೆ ಅಭಿವೃದ್ಧಿ ಪಡಿಸಲು ಗಮನ ಹರಿಸುತ್ತಿಲ್ಲ ಎಂದು ದೂರಿದರು.

ಜನಪ್ರತಿನಿಧಿಗಳು ಕೇವಲ ಚುನಾವಣೆಯಲ್ಲಿ ಬರ್ತಾರೆ, ಭರವಸೆ ನೀಡಿ ಮರೆತು ಬಿಡ್ತಾರೆ. ಮಳೆಯಿಂದಾಗಿ ರಸ್ತೆ ಕೆಸರು ಜಾರುತ್ತಿದೆ. ಜಮೀನಿಗೆ ಹೋಗಿ ಬರಲು ಸಾಧ್ಯವೇ ಆಗುತ್ತಿಲ್ಲ ಎಂದು ಸೈಕಲ್ ಸವಾರ ಮಹದೇವಪ್ಪ ನೋವು ತೋಡಿಕೊಂಡರು.

ಪ್ರತಿಭಟನೆಯಲ್ಲಿ ನಾಗೇಶ್, ಮಹದೇವಪ್ಪ, ಸುಂದ್ರಪ್ಪ, ರಮೇಶ್, ರಾಜೇಗೌಡ, ಆನಂದ, ನಾಗರಾಜು, ಜಯರಾಮ, ಸುನೀಲ್, ಮಹೇಶ್, ನಾಗ, ಕಾಂತರಾಜು, ಸ್ವಾಮಿ, ಶಿವ, ರಾಜೇಶ್, ಬಸವರಾಜು, ಯೋಗೇಶ್, ಮಾದಾಚಾರಿ ಸೇರಿ ಹಲವರು ಭಾಗವಹಿಸಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ