ಕನ್ನಡಪ್ರಭ ವಾರ್ತೆ ಹನೂರು
ನಂತರ ಬಿಜೆಪಿ ಯುವ ಮುಖಂಡ ನಿಶಾಂತ್ ಮಾತನಾಡಿ, ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣನವರು ಜಿಲ್ಲೆಯ್ಯಾದ್ಯಂತ ರಸ್ತೆ ಅಭಿವೃದ್ಧಿಪಡಿಸಲು ನೂರಾರು ಕೋಟಿ ಅನುದಾನ ಕೊಡಿಸಿದ್ದರು. ಅದರಂತೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸ್ವತಂತ್ರ ಪೂರ್ವದಿಂದಲೂ ಹಲವು ರಸ್ತೆಗಳು ಅಭಿವೃದ್ಧಿಯಾಗಿರಲಿಲ್ಲ, ಈ ಹಿನ್ನೆಲೆ ಕ್ಷೇತ್ರದ ಮುಖಂಡರ ಜೊತೆಗೂಡಿ ವಿ. ಸೋಮಣ್ಣರವರ ಸಹಕಾರದಿಂದ ಹತ್ತಕ್ಕೂ ಹೆಚ್ಚು ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಲೊಕ್ಕನಹಳ್ಳಿ ಮುಖ್ಯ ರಸ್ತೆಯಿಂದ ಮಹಾಲಿಂಗನ ಕಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವಾರು ವರ್ಷಗಳಿಂದ ಅಭಿವೃದ್ಧಿಯಾಗಿರಲಿಲ್ಲ. ಈ ವೇಳೆ ಕೆ ಆರ್ ಐ ಡಿ ಎಲ್ ನಿಗಮದಿಂದ ರಸ್ತೆ ಅಭಿವೃದ್ಧಿಪಡಿಸಲಾಯಿತು.
ಹಲವು ರಸ್ತೆಗಳ ಅಭಿವೃದ್ಧಿಗೆ ಹಿಂದಿನ ಶಾಸಕರು ಅವಕಾಶ ಮಾಡಿಕೊಡಲಿಲ್ಲ, ಆದರೂ ಕೆಲವು ಕಡೆ ಯಾವುದಕ್ಕೂ ಜಗ್ಗದೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ಹನೂರು ಕ್ಷೇತ್ರದ ಜನರಿಗೆ ತಲುಪಿಸಲಾಗಿದೆ ಎಂದರು.ಅದೇ ರೀತಿ ಕಳೆದ 2022ರ ಜುಲೈನಲ್ಲಿಯೇ ಅಂಡೆ ಕುರುಬನ ದೊಡ್ಡಿ ಗ್ರಾಮದಿಂದ ಹುಣಸೆಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ₹2.2 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಶಾಸಕರು ನಾನು ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಬೈಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿದ್ದ ಸದಾನಂದ್ ಮೂರ್ತಿಯವರು ಹಗಲಿರುಳು ಶ್ರಮಿಸಿದ್ದಾರೆ. ಈ ಅನುದಾನ ತರಲು ಯಾವುದೇ ಪಾತ್ರವಿಲ್ಲದೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ವಿ. ಸೋಮಣ್ಣ ಹಾಗೂ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಇದಕ್ಕೆ ಅವಕಾಶ ನೀಡಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಹುಲಿಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಘೋಷಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಭೌಗೋಳಿಕವಾಗಿ ಹನೂರು ತಾಲೂಕು ಅರಣ್ಯದ ಮಧ್ಯ ಭಾಗದಲ್ಲಿ ಬರುವುದರಿಂದ ಯಾವುದೇ ಕಾರಣಕ್ಕೂ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿ ಮಾಡಲು ಸಾಧ್ಯವಿಲ್ಲ, ಒಂದೊಮ್ಮೆ ಘೋಷಣೆ ಮಾಡಿದರೂ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ, ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಮಾನವ- ಪ್ರಾಣಿ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ವ್ಯಕ್ತಿ ಮೃತ ಪಟ್ಟಾಗ ಸರ್ಕಾರ ಕೇವಲ ಪರಿಹಾರ ಘೋಷಣೆ ಮಾಡಿದರೆ, ಸಮಸ್ಯೆ ಬಗೆಯಹರಿಯುವುದಿಲ್ಲ. ಬದಲಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯೆ ಉಮಾ ಮಹೇಶ್ವರಿ ಮಾತನಾಡಿ, ಶಾಸಕರು ಹಾಗೂ ಜನಪ್ರತಿನಿಧಿಗಳು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಂಡೆ ಕುರುಬನ ದೊಡ್ಡಿ ಗ್ರಾಮದ ಯುವ ರೈತ ಮುಖಂಡ ಅವತಾರ್ ಶಿವ ಮಾತನಾಡಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮಹಿಳೆಯರು, ರೈತ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.