ಗೊಜನೂರ ಗ್ರಾಮದಲ್ಲಿ ಬಸ್‌ ತಡೆದು ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Nov 04, 2025, 03:00 AM IST
ಕರವೇ ಕಾರ್ಯಕರ್ತರು, ಸಾರ್ವಜನಿಕರು ಡಿಪೋ ಮ್ಯಾನೇಜರ್ ಸವಿತಾ ಆದಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಗ್ರಾಪಂ ಮಾಜಿ ಸದಸ್ಯ ಶಿವರಾಜಗೌಡ ಪಾಟೀಲ ಮತ್ತು ಕರವೇ ರಾಜ್ಯ ಸಂಚಾಲಕ ಚೇತನ ಕಣವಿ ಮಾತನಾಡಿ, ನಮ್ಮೂರ ಮಾರ್ಗವಾಗಿ ಗದಗ- ಲಕ್ಷ್ಮೇಶ್ವರ ಬಸ್ಸುಗಳು ಸಂಚರಿಸಿದರೂ ಗ್ರಾಮದಲ್ಲಿ ನಿಲ್ಲಿಸುವುದಿಲ್ಲ ಎಂದರು.

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ- ಗದಗ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳು ಗೊಜನೂರ ಗ್ರಾಮದಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಸೋಮವಾರ ಬೆಳಗ್ಗೆ ಗ್ರಾಮಸ್ಥರು ಮತ್ತು ಕರವೇ ಗ್ರಾಮ ಘಟಕದಿಂದ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಪಂ ಮಾಜಿ ಸದಸ್ಯ ಶಿವರಾಜಗೌಡ ಪಾಟೀಲ ಮತ್ತು ಕರವೇ ರಾಜ್ಯ ಸಂಚಾಲಕ ಚೇತನ ಕಣವಿ ಮಾತನಾಡಿ, ನಮ್ಮೂರ ಮಾರ್ಗವಾಗಿ ಗದಗ- ಲಕ್ಷ್ಮೇಶ್ವರ ಬಸ್ಸುಗಳು ಸಂಚರಿಸಿದರೂ ಗ್ರಾಮದಲ್ಲಿ ನಿಲ್ಲಿಸುವುದಿಲ್ಲ. ಅಲ್ಲದೇ ಕಳೆದ ಹಲವು ತಿಂಗಳಿಂದ ಗದಗ-ಲಕ್ಷ್ಮೇಶ್ವರ ಮಧ್ಯದ ರಸ್ತೆಯು ಗುಂಡಿಗಳಿಂದ ಕೂಡಿದ್ದರಿಂದ ಬಸ್ಸುಗಳು ಲಕ್ಷ್ಮೇಶ್ವರದಿಂದ ಶಿರಹಟ್ಟಿ ಮೂಲಕ ಸುತ್ತುವರಿದು ಸಂಚರಿಸುತ್ತಿವೆ. ಬರುವ ಕೆಲವೇ ಬಸ್ಸುಗಳು ಸಹ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಗದಗ ಮತ್ತು ಲಕ್ಷ್ಮೇಶ್ವರ ಪಟ್ಟಣಗಳಿಗೆ ನಿತ್ಯ ಶಾಲಾ- ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬಸ್ಸಿಗೆ ಕಾದು ಕಾದು ಸುಸ್ತಾಗಿ ಶಾಲೆಗೆ ಸರಿಯಾದ ಸಮಯಕ್ಕೆ ಹೋಗುತ್ತಿಲ್ಲ ಎಂದರು.

ಇನ್ನು ಕೆಲವರು ಮನೆಗೆ ವಾಪಸ್ ಹೋಗುತ್ತಿದ್ದಾರೆ. ಶಾಲಾ ಮಕ್ಕಳಷ್ಟೇ ಅಲ್ಲದೇ ಸಾರ್ವಜನಿಕರು ಸಹ ನಿತ್ಯ ಪರದಾಡುತ್ತಿದ್ದಾರೆ. ನಮ್ಮೂರಲ್ಲಿಯೇ ಬಸ್ಸು ಹಾದು ಹೋದರೂ ನಿಲುಗಡೆಯಾಗುತ್ತಿಲ್ಲದಿರುವುದು ದುರ್ದೈವದ ಸಂಗತಿಯಾಗಿದೆ. ಇದು ದೀಪದ ಕೆಳಗೆ ಕತ್ತಲು ಎನ್ನುವಂಥ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹೆದ್ದಾರಿಯಲ್ಲಿ ಕೆಲ ಹೊತ್ತು ಈ ಮಾರ್ಗದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಪರಾಡುವಂತಾಗಿತ್ತು. ಸಂಚಾರ ದಟ್ಟಣೆ ಕಿರಿಕಿರಿ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿದರು. ಸ್ಥಳಕ್ಕಾಗಮಿಸಿದ ಡಿಪೋ ಮ್ಯಾನೇಜರ್ ಸವಿತಾ ಆದಿ ಅವರು, ರಜಾ ದಿನಗಳು, ಹಬ್ಬದ ದಿನವಾಗಿದ್ದರಿಂದ ಬಸ್ಸುಗಳು ತುಂಬಿಕೊಂಡೇ ಬರುತ್ತಿವೆ. ರಸ್ತೆ ಸಂಚಾರ ಹದಗೆಟ್ಟಿದ್ದರಿಂದ ವೇಳೆಯಲ್ಲಿ ವ್ಯತ್ಯಾಸವಾಗುತ್ತಿದೆ. ಒಂದಷ್ಟು ಬಸ್ಸುಗಳ ಕೊರತೆಯೂ ಇದ್ದು, ಆದಾಗ್ಯೂ ಶಾಲಾ ಅವಧಿಯಲ್ಲಿ ಈ ಮಾರ್ಗವಾಗಿ ಸಂಚರಿಸುವ ಎಲ್ಲ ಬಸ್ಸುಗಳನ್ನು ನಿಲುಗಡೆ ಮಾಡಲು ಸೂಚಿಸುತ್ತೇನೆ ಎಂದರು.ಈ ವೇಳೆ ಸಂಕೇತ ಎಸ್.ಪಿ. ಮಾಂತೇಶ ಜಾಲಮ್ಮನವರ, ಎನ್.ಎಂ ಸಂಶಿ, ವಿರುಪಾಕ್ಷ ಪಿ ಮಠ, ವೀರೇಶ ಕುಲಕರ್ಣಿ, ವಿಶ್ವೇಶ್ವರಯ್ಯ ಎಸ್.ಎ., ನಿಂಗನಗೌಡ ದೊಡ್ಡಗೌಡರ, ರಾಕೇಶ ಕಣವಿ, ರೋಹಿತ ಕೋರದಾಳ, ಸ್ನೇಹಾ ವಡಕಣ್ಣವರ, ರೇವತಿ ವಿ.ವಿ., ವಿಜಯಲಕ್ಷ್ಮೀ ಜಾಲಮ್ಮನವರ, ನಾಗಮ್ಮ ಶಿರಹಟ್ಟಿ ಸೇರಿ ಅನೇಕರಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ