ರಸ್ತೆ, ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork | Published : Aug 6, 2024 12:36 AM

ಸಾರಾಂಶ

ಗ್ರಾಪಂ ಸಭೆಗಳಲ್ಲಿ ಮನವಿಯಂತೆ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸುಮಾರು ೨ ಲಕ್ಷ ರು. ನೀಡಿದರೆ ಸಾಲದು. ಅದರ ಬದಲು ನೆರೆ ಹಾವಳಿಯಿಂದ ಸಂಪೂರ್ಣ ಹಾನಿಯಾಗಿರುವುದರಿಂದ ಸೇತುವೆ ಹಾಗೂ ರಸ್ತೆಯನ್ನು ಸೇರಿಸಿಕೊಂಡು ಸುಮಾರು ೧೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗುವುದರಿಂದ ಇದರ ಬಗ್ಗೆ ಗಮನ ಹರಿಸುವಂತೆ ಶಾಸಕರಿಗೆ ಹಾಗೂ ಜಿಪಂ, ತಾಪಂ ಮುಖ್ಯಾಧಿಕಾರಿಗಳಿಗೆ ಖುದ್ದಾಗಿ ಗ್ರಾಮಸ್ಥರೊಂದಿಗೆ ತೆರಳಿ ಮನವಿ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಮಾದಿಹಳ್ಳಿ ಹೋಬಳಿಯ ಆಂದಲೆ ಗ್ರಾಪಂ ವ್ಯಾಪ್ತಿಯ ಹಾರೋಹಳ್ಳಿ ಗ್ರಾಮದ ಚೊಮನಕೆರೆ ಒಡೆದ ಪರಿಣಾಮವಾಗಿ ರೈತರು ಬೆಳೆದ ಬೆಳೆಗಳಿಗೆ ನೀರು ನುಗ್ಗಿ ಸಂಪೂರ್ಣ ಬೆಳೆ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಹಾನಿಗೀಡಾಗಿರುವ ನಮ್ಮ ಗ್ರಾಮದ ರಸ್ತೆ ಹಾಗೂ ಸೇತುವೆಯನ್ನು ನಿರ್ಮಾಣ ಮಾಡಿಕೊಡುವಂತೆ ಸುಮಾರು ೫ ಊರಿನ ಗ್ರಾಮಸ್ಥರು ಕಾಲುವೆಗೆ ಇಳಿದು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರಾದ ರಮೇಶ್, ದ್ಯಾವಪ್ಪ, ರವಿ ಮಾತನಾಡಿ, ಸುಮಾರು ೧೦- ೧೫ ವರ್ಷಗಳಿಂದ ಹಾರೋಹಳ್ಳಿ ಗ್ರಾಮದ ಮೂಲಕ ಕೊನೇಯಕನಹಳ್ಳಿ ,ಗೊರೂರು, ಕೊಪ್ಪಲು, ಹೀರುಗುಪ್ಪೆ ಗ್ರಾಮಗಳಿಗೆ ತೆರಳಲು ಇದೇ ರಸ್ತೆಯಲ್ಲಿ ಸಂಚರಿಸಬೇಕು. ಅಲ್ಲದೆ ಶಾಲಾ ವಿದ್ಯಾರ್ಥಿಗಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಆದರೆ ಇತ್ತೀಚಿಗೆ ಬಿದ್ದಂಥ ಬಾರಿ ಮಳೆಯಿಂದಾಗಿ ನಮ್ಮ ಕೆರೆ ಒಡೆದು ಸಂಪೂರ್ಣವಾಗಿ ಬೆಳೆಗೆ ನೀರು ನುಗ್ಗಿದ ಪರಿಣಾಮ ರಸ್ತೆಯಲ್ಲಾ ಕೊಚ್ಚಿಹೋಗಿದೆ. ಸುಮಾರು ೧೫ ವರ್ಷಗಳಿಂದ ಇಲ್ಲಿಗೆ ತೂಬು ಸೇತುವೆಯನ್ನು ನಿರ್ಮಾಣ ಮಾಡಿಕೊಡುವಂತೆ ಬಂದಂತ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ನೆನಪಿಗೆ ಬರುತ್ತದೆ. ನಂತರ ಯಾರ ಗಮನಕ್ಕೂ ಬರುವುದಿಲ್ಲ. ನಾವು ಗ್ರಾಮಸ್ಥರೆಲ್ಲಾ ಸೇರಿ ನೀರು ಹರಿಯುವ ರಸ್ತೆಯನ್ನು ದಾಟಿ ಹೋಗುವ ಪರಿಸ್ಥಿತಿ ಬಂದಿದೆ. ಇಲ್ಲಿಯ ಗ್ರಾಮಸ್ಥರೆಲ್ಲಾ ಸೇರಿ ತೂಬನ್ನು ಒಡೆಯದಿದ್ದರೆ ಕೆಳ ಭಾಗದ ರೈತರು ತಾವು ಬೆಳೆದಂತ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿತ್ತು ಎಂದ ಅವರು, ಕೂಡಲೇ ನಮಗೆ ಶಾಶ್ವತವಾಗಿ ಕಿರು ಸೇತುವೆಯನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಎಲ್ಲಾ ಗ್ರಾಮಸ್ಥರು ಸೇರಿ ತಾಪಂ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ಚಂದ್ರಕಲಾ ರಮೇಶ್ ಮಾತನಾಡಿ, ಗ್ರಾಪಂ ಸಭೆಗಳಲ್ಲಿ ಮನವಿಯಂತೆ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸುಮಾರು ೨ ಲಕ್ಷ ರು. ನೀಡಿದರೆ ಸಾಲದು. ಅದರ ಬದಲು ನೆರೆ ಹಾವಳಿಯಿಂದ ಸಂಪೂರ್ಣ ಹಾನಿಯಾಗಿರುವುದರಿಂದ ಸೇತುವೆ ಹಾಗೂ ರಸ್ತೆಯನ್ನು ಸೇರಿಸಿಕೊಂಡು ಸುಮಾರು ೧೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗುವುದರಿಂದ ಇದರ ಬಗ್ಗೆ ಗಮನ ಹರಿಸುವಂತೆ ಶಾಸಕರಿಗೆ ಹಾಗೂ ಜಿಪಂ, ತಾಪಂ ಮುಖ್ಯಾಧಿಕಾರಿಗಳಿಗೆ ಖುದ್ದಾಗಿ ಗ್ರಾಮಸ್ಥರೊಂದಿಗೆ ತೆರಳಿ ಮನವಿ ಮಾಡಲಾಗುವುದು ಎಂದರು.

ಗ್ರಾಮಸ್ಥರಾದ ಪುಟ್ಟಯ್ಯ, ಸಂಪತ್, ಜಗದೀಶ್, ಕಿರಣ್, ರಘು, ಗೌರಯ್ಯ, ಕುಮಾರ್, ವಿನಯ್, ಶೇಖರ್ ,ರಾಮಯ್ಯ, ಅಭಿಷೇಕ್, ಮಹೇಶ್, ಪರಮೇಶ್ ಆಚಾರ್, ಸ್ವಾಮಿ ಇತರರು ಹಾಜರಿದ್ದರು.

Share this article