ಕನ್ನಡಪ್ರಭ ವಾರ್ತೆ ನಾಪೋಕ್ಲು
ಗ್ರಾಮದ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿರಾಜಪೇಟೆ ಸಮೀಪದ ಕೆದಮುಳ್ಳೂರು, ತೆರ್ಮೆಮೊಟ್ಟೆ, ಬಾರಿಕಾಡು ಸೇರಿದಂತೆ ಪಾಲಂಗಾಲ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.ರಸ್ತೆ ಕುಸಿದು ಒಂದು ತಿಂಗಳಾದರೂ ಬದಲಿ ರಸ್ತೆ ವ್ಯವಸ್ಥೆ ಮಾಡದ ತಾಲೂಕು ಆಡಳಿತ ಕಾರ್ಯವೈಖರಿಗೆ ಬೇಸತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಶೀಘ್ರದಲ್ಲೇ ಬದಲಿ ರಸ್ತೆ ವ್ಯವಸ್ಥೆ ಮಾಡದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ವಿರಾಜಪೇಟೆ ತಹಸೀಲ್ದಾರ್ ಇಲ್ಲಿ ಬಂದು ರಸ್ತೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಸಂಚಾರ ಬಂದ್ ಮಾಡಿ ಹೋದರು ಅಷ್ಟೇ. ಪ್ರಾಕೃತಿಕ ವಿಕೋಪ ಪರಿಹಾರದಡಿಯಲ್ಲಿ ಅನುದಾನ ಬಳಸಿ ನಮಗೆ ಓಡಾಡಲು ರಸ್ತೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎಂ. ಪರಮೇಶ್ವರ್ ಮಾತನಾಡಿ, ಮಳೆಯಿಂದಾಗಿ ಕಳೆದ ಕೆಲವು ದಿನಗಳ ಹಿಂದೆ ಗ್ರಾಮದಿಂದ ಕರಡ ಗ್ರಾಮವನ್ನು ಸಂಪರ್ಕಿಸುವ ಕಾಂಕ್ರಿಟ್ ರಸ್ತೆ ನಡುವಿನ ಸೀಳು ದೊಡ್ಡದಾಗಿ ರಸ್ತೆ ಸಂಚಾರ ದುಸ್ತರವಾಗಿತ್ತು. ಇದರಿಂದ ರಸ್ತೆ ಕುಸಿಯುವ ಭೀತಿಯಿಂದ ಅಧಿಕಾರಿಗಳು ರಸ್ತೆಗೆ ಹೊದಿಕೆ ಅಳವಡಿಸಿ ಸಂಚಾರ ನಿರ್ಬಂಧಿಸಿದ್ದರು. ರಸ್ತೆ ಸಂಚಾರ ನಿರ್ಬಂಧಿಸಿ ತಿಂಗಳಾಗುತ್ತಾ ಬಂದಿದ್ದರೂ ರಸ್ತೆ ದುರಸ್ತಿ ಇನ್ನು ಕೈಗೊಂಡಿಲ್ಲ. ಇದರಿಂದ ಪಟ್ಟಣದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಆದರೂ ತಾಲೂಕು ಆಡಳಿತ ಮಾತ್ರ ಇನ್ನೂ ಗ್ರಾಮಸ್ಥರ ಸಂಚಾರಕ್ಕೆ ಬದಲಿ ರಸ್ತೆ ವ್ಯವಸ್ಥೆಗೊಳಿಸಿಲ್ಲ ಎಂದರು.
ಗ್ರಾಮದಲ್ಲಿ ದಿನನಿತ್ಯ ವಿದ್ಯುತ್ ವ್ಯತ್ಯಯವಾಗುತಿದ್ದು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರಿಗೆ ಸಮಸ್ಯೆಯಾಗುತಿದೆ. ಜೊತೆಗೆ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸದಾ ಕಾಡುತ್ತಿದೆ. ತಾಲೂಕು ಆಡಳಿತವು ಪ್ರಕೃತಿ ವಿಕೋಪ ಪರಿಹಾರದಡಿ ಅನುದಾನ ಬಳಸಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ರಸ್ತೆ ವ್ಯವಸ್ಥೆಗೊಳಿಸಬೇಕು ಎಂದು ಒತ್ತಾಯಿಸಿದರು.ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಚೋಟು ಬಿದ್ದಪ್ಪ ಮಾತನಾಡಿ, ಸ್ಥಳೀಯರಿಗೆ ಸಮೀಪದಲ್ಲಿ ಹಾದು ಹೋಗುವ ಬದಲಿ ರಸ್ತೆಯನ್ನು ತಾಲೂಕು ಆಡಳಿತ ವ್ಯವಸ್ಥೆ ಮಾಡಿಕೊಡಬೇಕು. ಹೆಗ್ಗಳ ಮಾರ್ಗವಾಗಿ ಅಧಿಕ ಕಿ.ಮೀ. ಕ್ರಮಿಸಿ ವಿರಾಜಪೇಟೆಗೆ ತೆರಳಲು ಕಷ್ಟವಾಗುತ್ತದೆ. ದಿನನಿತ್ಯ ವಿದ್ಯುತ್ ಸಮಸ್ಯೆ ಇದೆ, ಮೊಬೈಲ್ ನೆಟ್ವರ್ಕ್ ಇಲ್ಲ. ಓಡಾಡಲು ರಸ್ತೆ ವ್ಯವಸ್ಥೆ ಇಲ್ಲ. ಶಾಲಾ ಮಕ್ಕಳಿಗೆ, ಉದ್ಯೋಗಕ್ಕೆ ತೆರಳುವವರಿಗೆ ತೊಂದರೆಯಾಗುತ್ತಿದ್ದು ಆದಷ್ಟು ಬೇಗ ರಸ್ತೆ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಪ್ರತಿಭಟನಾಕಾರರ ಮನವೊಲಿಸಿ ಮಾತನಾಡಿ, ಈಗಾಗಲೇ ಗ್ರಾಮಸ್ಥರ ಸಮಸ್ಯೆ ತಿಳಿದಿದೆ. ಸದ್ಯದಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ನಡೆಸುವ ಬಗ್ಗೆ ತಹಸೀಲ್ದಾರ್‌ಗೆ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು. ಬದಲಿ ರಸ್ತೆ ದುರಸ್ತಿಗೊಳಿಸಬೇಕಾದರೆ ಕನಿಷ್ಠ ಆರೇಳು ಲಕ್ಷ ರು. ಅನುದಾನ ಬೇಕಾಗುತ್ತದೆ. ಆದಷ್ಟು ಬೇಗ ಗ್ರಾಮಸ್ಥರ ಬೇಡಿಕೆ ಪರಿಗಣಿಸಿ ರಸ್ತೆ ಕಾಮಗಾರಿ ನಡೆಸಲಾಗುತ್ತದೆ ಎಂದರು.ಶೀಘ್ರದಲ್ಲಿ ಬದಲಿ ರಸ್ತೆ ವ್ಯವಸ್ಥೆಗೊಳಿಸದಿದ್ದಲ್ಲಿ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.