ಕನ್ನಡಪ್ರಭ ವಾರ್ತೆ ಯಳಂದೂರು
ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮನೆಗಳಿಗೆ ನಲ್ಲಿ ನೀರು ಬರದೆ ಒಂದು ವಾರ ಕಳೆದಿದೆ. ಇರುವ ಎರಡು ಕೊಳವೆಬಾವಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಟ್ಯಾಂಕರ್ ಮೂಲಕವೂ ನೀರು ಪೂರೈಕೆ ಮಾಡುತ್ತಿಲ್ಲ,
ಜತೆಗೆ ಕೊಳವೆ ಬಾವಿಯಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಜನರು ಪರದಾಡುವಂತಾಗಿದೆ. ಪಿಡಿಒರವರು ಜನರಿಗೆ ಕುಡಿಯುವ ನೀರಿನ ವಿಚಾರದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ, ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಸಾಕಷ್ಟು ಬಾರಿ ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಇದರಿಂದ ಆಕ್ರೋಶಗೊಂಡ 50ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಸೇರಿ ಗುರುವಾರ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಖಾಲಿ ಕೊಡ, ಬಿಂದಿಗೆಗಳನ್ನು ಇಟ್ಟು ಪಿಡಿಒ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ವತಿಯಿಂದ 2026ನೇ ಸಾಲಿನಲ್ಲಿ ಬರ ಪರಿಹಾರ ಯೋಜನೆಯಲ್ಲಿ ಕುಡಿಯುವ ನೀರಿನ ಕಾಮಗಾರಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಮಾಡಿರುವ ಕಾಮಗಾರಿಯ ಪೈಪ್ ಲೈನ್ , ಮೋಟಾರ್ ಯಂತ್ರದ ಕಾಮಗಾರಿಯನ್ನು ಸಹ ಅರ್ಧಂಬರ್ಧವಾಗಿ ಕಾಟಚಾರಕ್ಕೆ ಮಾಡಿದ್ದಾರೆ. ಇದು ಜನರಿಗೆ ಮತ್ತಷ್ಟು ಸಮಸ್ಯೆ ಉಂಟಾಗಲು ಪ್ರಮುಖ ಕಾರಣವಾಗಿದೆ.