ಶೃಂಗೇರಿ ಕೆರೆ ಪಂಚಾಯಿತಿ ಹೊರಣೆ ಗ್ರಾಮಸ್ಥರ ಬವಣೆ। ಮರದ ದಿಮ್ಮಿ, ಕಾಲು ಸಂಕವೇ ನಿತ್ಯ ಸಂಚಾರಕ್ಕೆ ದಾರಿ
ಕನ್ನಡಪ್ರಭ ವಾರ್ತೆ, ಶೃಂಗೇರಿ
ಸ್ವಾತಂತ್ರ್ಯ ಬಂದು ಸುಮಾರು 75 ವರ್ಷಗಳೇ ಕಳೆದಿವೆ. ಅನೇಕ ಸರ್ಕಾರಗಳು ಬಂದು ಹೋಗಿವೆ. ಆಡಳಿತ, ಜನಪ್ರತಿನಿದಿಗಳು ಬದಲಾಗುತ್ತಲೇ ಇದ್ದಾರೆ. ಆದರೆ ಇಲ್ಲಿಯ ಗ್ರಾಮಸ್ಥರಿಗೆ ಓಡಾಡಲು ಸರಿಯಾದ ರಸ್ತೆಯಿಲ್ಲ. ಸೇತುವೆಯಿಲ್ಲ. ವಿದ್ಯುತ್ ಇಲ್ಲ. ಆಧುನಿಕ ಪ್ರಪಂಚದಲ್ಲಿಯೂ ಮೂಲ ಸೌಕರ್ಯಗಳಿಂದ ವಂಚಿತರಾಗಿ ನಾಗರಿಕ ವ್ಯವಸ್ಥೆ ಯಿಂದ ದೂರವಾದ ಬದುಕು ಇವರದು. ಪ್ರತೀ ವರ್ಷ ಗ್ರಾಮಸ್ಥರೇ ಮರದ ದಿಮ್ಮಿ, ಅಡಕೆ ದಬ್ಬೆ, ಮರದ ಸಾಮಗ್ರಿ, ಬೀಳುಗಳನ್ನು ಬಳಸಿ ಕಾಲು ಸಂಕ ನಿರ್ಮಿಸಿಕೊಂಡು ಅದರಲ್ಲೆ ಓಡಾಡಬೇಕಾದ ದಯನೀಯ ಸ್ಥಿತಿ ಗ್ರಾಮಸ್ಥರದು.ತಾಲೂಕಿನ ಕೆರೆಪಂಚಾಯಿತಿ ಹೊರಣೆ ಗ್ರಾಮಸ್ಥರ ಜ್ವಲಂತ ಸಮಸ್ಯೆ..ಶೃಂಗೇರಿಯಿಂದ ಸುಮಾರು 25-30 ಕಿ.ಮೀ. ದೂರದ ಈ ಪ್ರದೇಶದಲ್ಲಿ ಗಿರಿಜನ ಕುಟುಂಬಗಳೇ ಹೆಚ್ಚಾಗಿದ್ದು ಈ ಪ್ರದೇಶದಿಂದ ಗ್ರಾಮಸ್ಥರು ಅಗತ್ಯ ಕೆಲಸ ಕಾರ್ಯಗಳಿಗೆ ಹೋಗಲು ಹಳ್ಳ ದಾಟಿ 6 ಕಿ.ಮೀ. ದೂರದ ಮಾತೋಳ್ಳಿ ಮೂಲಕ ಅಲ್ಲಿಂದ 10 ಕಿ.ಮೀ. ಸಾಗಿ ನೆಮ್ಮಾರಿಗೆ ಬರಬೇಕು. ಈ ಕಾಲು ಸಂಕದ ಮೂಲಕವೇ ಶಾಲಾ ಕಾಲೇಜು ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆ, ಕಾಲೇಜು,ಆಸ್ಪತ್ರೆ,ಪಡಿತರ ಕೇಂದ್ರಗಳಿಗೆ, ಬ್ಯಾಂಕ್,ಕೃಷಿ ಚಟುವಟಿಕೆಗಳಿಗೆ ದಿನನಿತ್ಯ ಓಡಾಡುತ್ತಾರೆ.
ಮಳೆಗಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ತೆರಳುತ್ತಿದ್ದ ಗ್ರಾಮಸ್ಥ ಶೇಷಪ್ಪ ಕಾಲುಸಂಕದಿಂದ ಆಯತಪ್ಪಿ ಬಿದ್ದು ಗಾಯಗೊಂಡು 6 ತಿಂಗಳು ಚೇತರಿಸಿಕೊಳ್ಳುವಂತಾಯಿತು. ಕಳೆದೆರೆಡು ವರ್ಷಗಳ ಹಿಂದೆ ತೀರ್ಥಹಳ್ಳಿ ಬಳಿ ಕಾಲು ಸಂಕದಲ್ಲಿ ಜಾರಿಬಿದ್ದ ಶಾಲಾ ಬಾಲಕಿ ಕೊಚ್ಚಿಹೋದ ಘಟನೆ ನಮ್ಮ ಕಣ್ಣುಮುಂದೆ ಇದೆ. ದುರ್ಘಟನೆಗಳು ಸಂಭವಿಸಿದಾಗ ಮಾತ್ರ ಪರಿಹಾರ, ಸೇತುವೆ ಭರವಸೆ ನೀಡುತ್ತಾರೆ. ಆದರೆ ಇಲ್ಲಿನವರಿಗೆ ಕಾಲು ಸಂಕವೇ ಗತಿ.
ಗ್ರಾಮಸಭೆ, ಜನಸಂಪರ್ಕ ಸಭೆ, ಜನಸ್ಪಂದನ ಸಭೆ ಹೀಗೆ ಯಾವುದೇ ಅಹವಾಲು, ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ನಕ್ಸಲ್ ಪೀಡಿತ ಪ್ರದೇಶ ಅಭಿವೃದ್ಧಿ ಪ್ಯಾಕೇಜ್ ಯೋಜನೆಯಡಿ ಗಿರಿಜನ ಅಭಿವೃದ್ಧಿಯಡಿ ಗ್ರಾಮಸ್ಥರಿಗೆ ಯಾವುದೇ ಅಭಿವೃದ್ದಿ ಪ್ರಯೋಜನ ವಾಗಿಲ್ಲ.ಎಲ್ಲದರಿಂದಲೂ ವಂಚಿತರಾಗಿ ದೂರ ಉಳಿದಿದ್ದಾರೆ. ಸಂಬಂದಪಟ್ಟ ಇಲಾಖೆ ತುರ್ತಾಗಿ ಇಲ್ಲಿ ತೂಗುಸೇತುವೆ ನಿರ್ಮಿಸಿಕೊಡಬೇಕು ಎಂಬುದು ಎಲ್ಲರ ಆಶಯ.
ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ
-ಸತೀಶ್ ಗ್ರಾಮಸ್ಥ.
ಅಗತ್ಯ ಮೂಲ ಸೌಕರ್ಯ ಕಲ್ಪಿಸಿ
- ಶೇಷಪ್ಪ ಗ್ರಾಮಸ್ಥ
17 ಶ್ರೀ ಚಿತ್ರ 1-ಶೃಂಗೇರಿ ಕೆರೆ ಪಂಚಾಯಿತಿ ಹೊರಣೆಯಲ್ಲಿ ಗ್ರಾಮಸ್ಥರೆ ನಿರ್ಮಿಸಿಕೊಂಡಿರುವ ಕಾಲು ಸಂಕ
17 ಶ್ರೀ ಚಿತ್ರ 2-ಶೇಷಪ್ಪ
17 ಶ್ಪೀ ಚಿತ್ರ 3-ಸತೀಶ್