ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಮುಳ್ಳು ಗದ್ದುಗೆ ಉತ್ಸವದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಪಾಲ್ಗೊಂಡು ಸ್ವಾಮಿ ಕೃಪೆಗೆ ಪಾತ್ರರಾದರು.ಗ್ರಾಮದಲ್ಲಿ ರಥೋತ್ಸವ ಹಾಗೂ ಮುಳ್ಳು ಗದ್ದುಗೆ ಉತ್ಸವ ವಿಶಿಷ್ಟವಾಗಿ ನಡೆಯುತ್ತದೆ. ಪ್ರತಿ ವರ್ಷವೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಈ ಭಾಗದಲ್ಲಿ ಆಂಜನೇಯ ಸ್ವಾಮಿ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಮಾತ್ರವಲ್ಲ, ಮುಳ್ಳು ಗದ್ದುಗೆ ಉತ್ಸವದಲ್ಲಿಯೂ ಪಾಲ್ಗೊಂಡು ವಿನಯ್ ಕುಮಾರ್ ಗ್ರಾಮಸ್ಥರ ಜೊತೆ ಖುಷಿಪಟ್ಟರು.
ಇದೇ ವೇಳೆ ಅವರು ತಮಟೆ ಬಾರಿಸುವ ಮೂಲಕ ಸಂತಸ ಹಂಚಿಕೊಂಡರು. ವಿನಯ್ ಕುಮಾರ್ ಗ್ರಾಮಕ್ಕೆ ಬರುತ್ತಿದ್ದಂತೆ ಅದ್ಧೂರಿ ಸ್ವಾಗತ ಕೋರಿದ ಗ್ರಾಮಸ್ಥರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ತಮಗೆ ಬೆಂಬಲಿಸುವುದಾಗಿ ಹೇಳಿದರು.ವಿನಯ್ ಕುಮಾರ್ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಮುಳ್ಳು ಗದ್ದುಗೆ ವೇಳೆ ದೇವರನ್ನು ಹೊತ್ತರು. ಆಗ ಗ್ರಾಮಸ್ಥರು ಮೆರವಣಿಗೆ ಮೂಲಕ ತೆರಳುತ್ತಿದ್ದರು. ಗ್ರಾಮಸ್ಥರೊಂದಿಗೆ ವಿನಯ್ ಕುಮಾರ್ ಸಹ ನೃತ್ಯ ಮಾಡಿದ್ದು, ಜನರ ಗಮನ ಸೆಳೆಯಿತು.
ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು, ಶ್ರೀ ಆಂಜನೇಯ ಸ್ವಾಮಿಯ ದರ್ಶನ ಪಡೆದಿದ್ದು ಖುಷಿ ಆಯಿತು. ಗ್ರಾಮಸ್ಥರೆಲ್ಲರೂ ಸೇರಿ ಒಟ್ಟಾಗಿ ಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. ಮಳೆ, ಬೆಳೆ ಚೆನ್ನಾಗಿ ಆಗಲಿ. ಈ ಬಾರಿ ಭೀಕರ ಬರಗಾಲದಿಂದ ರೈತರು, ಜನರು ತತ್ತರಿಸಿ ಹೋಗಿದ್ದಾರೆ. ವರುಣದೇವ ಕೃಪೆ ತೋರಲಿ, ರೈತರ ಬದುಕು ಹಸನಾಗಲಿ ಎಂದು ಹೇಳಿದರು.ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ವಾಭಿಮಾನಿಯಾಗಿ ಕಣಕ್ಕಿಳಿದಿದ್ದೇನೆ. ನೀವೆಲ್ಲರೂ ಬೆಂಬಲಿಸುತ್ತೀರಾ ಎಂಬ ಬಲವಾದ ವಿಶ್ವಾಸ, ನಂಬಿಕೆ ಇದೆ. ನೀವು ತೋರಿರುವ ಪ್ರೀತಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು.
ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ಇದು ಸಾಕಾರಗೊಳ್ಳಬೇಕಾದರೆ ನಾನು ಗೆಲ್ಲಬೇಕು. ಉತ್ಸಾಹಿ ಯುವಕನಿಗೆ ಬೆಂಬಲ ನೀಡಿ. ಜನಾದೇಶ, ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟು ಪಕ್ಷೇತರನಾಗಿ ಕಣಕ್ಕಿಳಿದಿದ್ದೇನೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.