ಕನ್ನಡಪ್ರಭ ವಾರ್ತೆ ಕೋಲಾರಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಕಾರಣರಾದ ವಿರಾಜಪೇಟೆಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪೊನ್ನಣ್ಣ ಅವರ ಸಹಚರ ತನ್ನೀರ್ ಮೈನಾ ವಿರುದ್ದ ಕ್ರಮ ಜರುಗಿಸಬೇಕು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಜಿಲ್ಲಾ ಬಿಜೆಪಿ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು. ವಿನಯ್ ಸೋಮಯ್ಯ ಶಾಸಕ ಪೊನ್ನಣ್ಣ ವಿರುದ್ದ ಅಪಹಾಸ್ಯ ಮಾಡಿ ವಾಟ್ಸ್ ಅಪ್ ಮಾಡಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ತನ್ನೀರ್ ಮೈನಾ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪೊಲೀಸರು ಕಳೆದ ಎರಡು ತಿಂಗಳ ಹಿಂದೆ ಬಂಧಿಸಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವಿನಯ್ ಸೋಮಯ್ಯ ಮನನೊಂದು ಶುಕ್ರವಾರ ಬೆಂಗಳೂರಿನ ನಾಗವಾರ ಬಿಜೆಪಿ ಕಚೇರಿಯಲ್ಲಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎಂದು ವಿವರಿಸಿದರು.ಅಧಿಕಾರ ದುರ್ಬಳಕೆ:
ಈ ಸಂಬಂಧ ಗೃಹ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡದೆ, ಪರಿಶೀಲಿಸೋಣ ಎಂದು ತಿಪ್ಪೇಸಾರಿಸುವ ಮಾತನಾಡಿದ್ದಾರೆ. ಕಾಂಗ್ರೆಸ್ ಅಧಿಕಾರಿ ದುರ್ಬಳಕೆ ಮಾಡಿಕೊಂಡು ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದೆ ಎಂದು ಖಂಡಿಸಿದರು. ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ೧೩೬ ಸೀಟ್ ಪಡೆದು ಅಧಿಕಾರಕ್ಕೆ ಬಂದ ೨ ವರ್ಷಗಳಲ್ಲಿ ಯಾವೊಂದು ಅಭಿವೃದ್ದಿ ಕಾರ್ಯಗಳನ್ನು ಮಾಡದೆ ಗ್ಯಾರಂಟಿ ಭರವಸೆಗಳ ಈಡೇರಿಸಲು ವಿವಿಧ ಅಭಿವೃದ್ದಿ ನಿಗಮಗಳ ಅನುದಾನಕ್ಕೆ ಕನ್ನಹಾಕಿ, ನುಡಿದಂತೆ ನಡೆದಿದ್ದೇವೆ ಎಂಬ ತಮ್ಮ ಭುಜವನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಹಾಲು ಉತ್ಪಾದಕರಿಗೆ ೬ ತಿಂಗಳಿಂದ ಬಾಕಿ ಹಣ ಸಂದಾಯ ಮಾಡಿಲ್ಲ ಎಂದು ಟೀಕಿಸಿದರು .ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಮುಖಂಡರಾದ ಸಿ.ಡಿ.ರಾಮಚಂದ್ರ, ಎಸ್.ಬಿ.ಮುನಿವೆಂಕಟಪ್ಪ, ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ವಿಜಯಕುಮಾರ್, ಸತ್ಯನಾರಾಯಣರಾವ್, ತಿಮ್ಮರಾಯಪ್ಪ, ಅರುಣಮ್ಮ, ಮಮತಮ್ಮ, ಗೋವಿಂದ್, ಶ್ರೀನಿವಾಸ್, ಮಂಜುನಾಥ್, ಸಾ.ಮಾ.ಬಾಬು, ಮಂಜುನಾಥ್, ಚಂದ್ರಶೇಖರ್ ಮತ್ತಿತರರು ಇದ್ದರು.