ಹುಬ್ಬಳ್ಳಿ:
ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಿ ಸೂಕ್ತ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಸ್ವಾತಂತ್ರ್ಯ ನಂತರದಿಂದ ಈ ವರೆಗೂ ಈ ರೀತಿಯ ಚಾರಿತ್ರ್ಯ ರಹಿತ ಕಳಂಕವನ್ನು ಯಾವೊಬ್ಬ ನಾಯಕರು ಹೊತ್ತಿರಲಿಲ್ಲ. ಈ ಪ್ರಕರಣದಿಂದ ಧಾರವಾಡದ ಮೇಲೆ ದೊಡ್ಡ ಕಳಂಕ ಬಂದಿದೆ. ಹೀಗಾಗಿ ಇದರ ತನಿಖೆ ಸರಿಯಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಈಗಾಗಲೇ ಶಾಸಕ ವಿನಯ ಕುಲಕರ್ಣಿ ವಿರುದ್ಧ ಸ್ವತಃ ಮಹಿಳೆ ತನ್ನ ಮೇಲಾದ ದೌರ್ಜನ್ಯದ ಕುರಿತು ಸಂಪೂರ್ಣ ವಿವರಣೆ ನೀಡಿದ್ದಾರಲ್ಲದೇ, ಎಫ್‌ಐಆರ್ ಕೂಡಾ ದಾಖಲಿಸಿದ್ದಾರೆ. ಹೀಗಿದ್ದಾಗ್ಯೂ ಈ ವರೆಗೂ ಅವರ ಬಂಧನವಾಗಿಲ್ಲ. ಈ ಹಿಂದೆ ಇಂತಹ ದೌರ್ಜನ್ಯ ಪ್ರಕರಣಗಳು ರೇವಣ್ಣ ಮತ್ತು ಮುನಿರತ್ನ ವಿರುದ್ಧ ದಾಖಲಾದಾಗ ತತ್‌ಕ್ಷಣದಲ್ಲಿ ಅವರನ್ನು ಬಂಧಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಅವರ ಸಮರ್ಥನೆ ಹಾಗೂ ರಕ್ಷಣೆಗೆ ಹೋಗಿರಲಿಲ್ಲ. ಆದರೀಗ ಕಾಂಗ್ರೆಸ್ ಶಾಸಕರ ವಿರುದ್ಧ ಇಂತಹ ಪ್ರಕರಣ ದಾಖಲಾಗಿದ್ದು, ಅವರ ಬಂಧಿಸದೇ ಸಮರ್ಥನೆಗೆ ಮುಂದಾಗಿರುವುದು ಮತ್ತು ನಿರಾಸಕ್ತಿ ತೋರುತ್ತಿರುವುದು ಸಲ್ಲದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿ ಮುಚ್ಚಿ ಹಾಕುವ ಹುನ್ನಾರ ನಡೆಸಿದೆ. ಧಾರವಾಡದ ಮೇಲೆ ಬಂದಿರುವ ಕಳಂಕ ಹೋಗಿಸಲು ಸತ್ಯಾಸತ್ಯತೆ ಹೊರಬರಬೇಕಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಅಲ್ಲದೇ, ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ವಿನಯ ಕುಲಕರ್ಣಿ ವಿರುದ್ಧ ಗುರುತರ ಆರೋಪ ಬಂದಿದೆಯಲ್ಲದೇ, ಪ್ರಕರಣ ಕೂಡ ದಾಖಲಾಗಿದೆ. ಮುನಿರತ್ನ ಪ್ರಕರಣ ಆದಾಗ ಅವರನ್ನು ತಕ್ಷಣದಲ್ಲಿಯೇ ಬಂಧಿಸಿದಲ್ಲದೇ, ಜಾಮೀನು ಸಿಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ. ಇದೀಗ ಇಂತಹದ್ದೇ ಪ್ರಕರಣ ವಿನಯ ಕುಲಕರ್ಣಿ ವಿರುದ್ಧ ದಾಖಲಾಗಿದ್ದು, ಇದರಲ್ಲೂ ಅದೇ ಉತ್ಸಾಹವನ್ನು ಸರ್ಕಾರ ತೋರಿಸಲಿ ಎಂದು ಸವಾಲು ಹಾಕಿದರು.ಹು-ಧಾ ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ರೇವಣ್ಣ ಮತ್ತು ಮುನಿರತ್ನ ಪ್ರಕರಣದಲ್ಲಿ ವಹಿಸಿದ ಕ್ರಮದಂತೆ ಈ ಪ್ರಕರಣದಲ್ಲಿಯೂ ಕ್ರಮವಹಿಸಬೇಕು. ಸ್ವಾರ್ಥ ಹಾಗೂ ಸ್ವಹಿತ ರಾಜಕಾರಣಕ್ಕೆ ಜನರನ್ನು ಬಲಿ ಕೊಡುವುದು ಸರಿಯಲ್ಲ. ಕೂಡಲೇ ಪ್ರಕರಣದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.