ವಿನಯ್‌ ಆತ್ಮಹತ್ಯೆ ನೋವುಂಟು ಮಾಡಿದೆ: ಪೊನ್ನಣ್ಣ

KannadaprabhaNewsNetwork |  
Published : Apr 05, 2025, 12:49 AM IST

ಸಾರಾಂಶ

ನನಗೂ ವಿನಯ್ ಸೋಮಯ್ಯ ಅವರಿಗೂ ಯಾವುದೇ ಸಂಪರ್ಕವಿರಲಿಲ್ಲ. ನಾನವರೊಂದಿಗೆ ಮಾತು ಕೂಡ ಆಡಲಿಲ್ಲ. ಅಲ್ಲದೇ ಅವರ ಮೇಲೆ ದೂರು ನೀಡುವಂತೆ ಕೂಡ ನಾನು ಹೇಳಲಿಲ್ಲ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿನಯ್ ಸೋಮಯ್ಯ ಆತ್ಮಹತ್ಯೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ. ಆತ್ಮಹತ್ಯೆಯಂಥ ಕೃತ್ಯಕ್ಕೆ ಯಾರೂ ಕೂಡ ಶರಣಾಗಬಾರದು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಅವರು ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ನನಗೂ ವಿನಯ್ ಸೋಮಯ್ಯ ಅವರಿಗೂ ಯಾವುದೇ ಸಂಪರ್ಕವಿರಲಿಲ್ಲ. ನಾನವರೊಂದಿಗೆ ಮಾತು ಕೂಡ ಆಡಲಿಲ್ಲ. ಅಲ್ಲದೇ ಅವರ ಮೇಲೆ ದೂರು ನೀಡುವಂತೆ ಕೂಡ ನಾನು ಹೇಳಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ತೇಜೋವಧೆ ಮಾಡಿರುವುದು ಮತ್ತು ಅವರ ವಿರುದ್ಧ ಪೊಲೀಸ್ ದೂರು ದಾಖಲಾಗಿರುವುದು ನಂತರವೇ ನನಗೆ ಗೊತ್ತಾಯಿತು. ಈ ಬಗ್ಗೆ ರಾಜ್ಯ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆ ಇರುವುದರಿಂದ ನಾನು ಪೊಲೀಸರ ಮೇಲೆ ಒತ್ತಡ ಹಾಕುವಂತಹ ಪ್ರಶ್ನೆಯೇ ಇಲ್ಲ ಎಂದರು.

ಬಿಜೆಪಿಯವರು ಹಸ್ತಕ್ಷೇಪ ಮಾಡುತ್ತಿದ್ದಾರೆ:

ಪ್ರಕರಣದಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮಾಡುತ್ತಾರೆ. ಆದರೆ ಬಿಜೆಪಿಯವರು ಪೊಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಡಿಸಿಪಿಗೆ ಕೊಡಗಿನಿಂದ ಬಿಜೆಪಿ ನಾಯಕರು ಫೋನ್ ಮಾಡಿದ್ದಾರೆ. ಸಾವು ಆದ ಸಂದರ್ಭ ನಾವು ಕುಟುಂಬಸ್ಥರೊಂದಿಗೆ ಇರಬೇಕು. ಕುಟುಂಬಸ್ಥರೊಂದಿಗೆ ನಾನು ಈಗಾಗಲೇ ಮಾತನಾಡಿದ್ದೇನೆ. ಬಿಜೆಪಿಯವರು ಸಾವಿನ ಮೇಲೆ ರಾಜಕಾರಣ ಮಾಡುತ್ತಾರೆ. ತಡೆಯಾಜ್ಞೆ ಆಗಿದೆ ಎಂದರೆ ಯಾವ ಪೊಲೀಸ್ ಕೂಡ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಡೆತ್ ನೋಟ್ ಬರೆದಿಟ್ಟಿದ್ದೀರಾ? ವಾಟ್ಸಾಪ್ ಮೆಸೇಜ್ ಕಳುಹಿಸಿದ್ದಾರೆ. ಇದನ್ನು ಕಳುಹಿಸಿದವರು ಯಾರು? ವಾಟ್ಸಾಪ್ ಮೆಸೇಜ್ ಹೇಗೆ ಡೆತ್ ನೋಟ್ ಆಗಲು ಸಾಧ್ಯ? ಎಂದು ಪೊನ್ನಣ್ಣ ಪ್ರಶ್ನಿಸಿದ್ದಾರೆ.

--------------------

ಡೆತ್ ನೋಟ್‌ನಲ್ಲಿ ಹೆಸರು ಬಂದಿರುವುದು ಆಶ್ಚರ್ಯ ಉಂಟುಮಾಡಿದೆ: ಮಂಥರ್‌ ಗೌಡ

ಮಡಿಕೇರಿ: ವಿನಯ್ ಡೆತ್ ನೋನ್‌ನಲ್ಲಿ ನನ್ನ ಹೆಸರು ಬಂದಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಶಾಸಕ ಡಾ. ಮಂಥರ್ ಗೌಡ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಜೊತೆ ನಾನು ನ.24ರಂದು ಮೊಬೈಲ್ ಮೂಲಕ ಮಾತಾಡಿದ್ದೆ. ಆಸ್ಪತ್ರೆ ವಿಚಾರದಲ್ಲಿ ನನಗೆ ವಿನಯ್ ಮೆಸೇಜ್ ಮಾಡಿದ್ದರು. ಆಗ ನಾನು ಗ್ರೂಪ್‌ನಲ್ಲಿ ಸಾಕಷ್ಟು ಮೆಸೇಜ್ ಬರುತ್ತಿರುತ್ತವೆ. ಸಮಸ್ಯೆ ಪರಿಹಾರಕ್ಕೆ ಗ್ರೂಪ್‌ನಲ್ಲಿ ಮೆಸೇಜ್ ಮಾಡುವ ಬದಲು ನನ್ನ ವಾಟ್ಸಾಪ್‌ಗೆ ಮೆಸೇಜ್ ಮಾಡಿ ಅಂದಿದ್ದು ಬಿಟ್ಟರೆ ನನಗೂ ವಿನಯ್‌ಗೂ ಬೇರೆ ಯಾವುದೇ ಮಾತುಕತೆ ನಡೆದಿಲ್ಲ. ಹೀಗಿದ್ದರೂ ನನ್ನ ಹೆಸರು ಈ ಪ್ರಕರಣದಲ್ಲಿ ಅನಗತ್ಯವಾಗಿ ಉಲ್ಲೇಖ ಆಗುತ್ತಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ವಿನಯ್ ಸಾವು ನನಗೂ ನೋವು ತಂದಿದೆ. ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳುತ್ತೇನೆ. ಕುಟುಂಬದ ನೆರವಿಗೆ ಸದಾ ಇರುತ್ತೇನೆ. ಪ್ರಕರಣದ ಸತ್ಯಾಸತ್ಯತೆ ಹೊರ ಬರಲಿ ಎಂದು ಕೋರುತ್ತೇನೆ ಎಂದು ಹೇಳಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ