- ಸಂಸದೆ ಡಾ.ಪ್ರಭಾ ಚಾಲನೆ । ಡೊಳ್ಳು, ಹಲಗೆ ಸದ್ದಿಗೆ ಭಕ್ತರ ಹೆಜ್ಜೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ವಿನೋಬ ನಗರದ ಶ್ರೀ ವೀರ ವರಸಿದ್ಧಿ ವಿನಾಯಕ ಸೇವಾ ಸಮಿತಿಯ 33ನೇ ವರ್ಷದ ಈ ಬಾರಿ ಗಣೇಶೋತ್ಸವ ಹಲವಾರು ವಿಶೇಷತೆಗಳೊಂದಿಗೆ ನಡೆಯಿತು.
ಯಾವುದೇ ಡಿ.ಜೆ. ಸೌಂಡ್ ಸಿಸ್ಟಂನ ಅಬ್ಬರವಿಲ್ಲದೆ, ಕಲಾ ತಂಡಗಳೊಂದಿಗೆ ಮೆರವಣಿಗೆ ಸಾಗಿತು. ಜಿಲ್ಲಾಡಳಿತ ಸೂಚಿಸಿದ್ದ ನಿಯಮಗಳನ್ನು ಗೌರವಿಸಿ, ಭಕ್ತರು ಮೆರವಣಿಗೆಯಲ್ಲಿ ಸರಳತೆ ಮೆರೆದಿದ್ದು ಕಂಡುಬಂತು.ಪ್ರತಿವರ್ಷ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡುತ್ತಿದ್ದರು. ಆದರೆ ಈ ವರ್ಷ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಮೆರವಣಿಗೆಗೆ ಚಾಲನೆ ನೀಡಿದರು.
ಪ್ರತಿವರ್ಷ ಡಿಜೆ ಸೌಂಡಿನ ಸದ್ದಿಗೆ ಹೆಜ್ಜೆ ಹಾಕಿ ಕುಣಿಯುತ್ತಿದ್ದ ಯುವಕರು, ಯುವತಿಯರು ಈ ಬಾರಿ ಜನಪದ ನೃತ್ಯ, ಸಾಂಪ್ರದಾಯಿಕ ಕಲೆಗಳಾದ ಡೊಳ್ಳು, ಹಲಗೆ, ನಂದಿಕೋಲು ಕುಣಿತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಮಧ್ಯಾಹ್ನ 2.30ಕ್ಕೆ ಆರಂಭವಾದ ಮೆರವಣಿಗೆಯಲ್ಲಿ ಕೆಲವೇ ಭಕ್ತರು ಭಾಗವಹಿಸಿದ್ದರು. ಗಣೇಶ ಮೂರ್ತಿ ನಗರದ ಪ್ರಮುಖ ರಸ್ತೆ ಪ್ರವೇಶಿಸುತ್ತಿದ್ದಂತೆ ಭಕ್ತರ ಸಂಖ್ಯೆ ಹೆಚ್ಚಾಯಿತು. ನಿಧಾನವಾಗಿ ಸಾಗಿದ ಮೆರವಣಿಗೆಯು ಸಂಜೆ ಹೊತ್ತಿಗೆ ಪಿ.ಬಿ.ರಸ್ತೆ ತಲುಪಿತು. ಅಲ್ಲಿಂದ ಪ್ರಮುಖ ಬೀದಿಗಳ ಮುಖಾಂತರ ಬಾತಿ ಕೆರೆಯಲ್ಲಿ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಕಟ್ಟುನಿಟ್ಟಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಅರೆ ಮಿಲಿಟರಿ ಪಡೆಗಳು ಕರ್ತವ್ಯದಲ್ಲಿ ನಿರತರಾಗಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ಅನೇಕ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.- - -
-5ಕೆಡಿವಿಜಿ42, 43:ದಾವಣಗೆರೆಯ ವಿನೋಬ ನಗರದ ವೀರವರಸಿದ್ಧಿ ವಿನಾಯಕ ಸಮಿತಿಯ ಗಣೇಶನ ವಿಸರ್ಜನೆ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು.