ಕನ್ನಡಪ್ರಭ ವಾರ್ತೆ ತುಮಕೂರುಇಲ್ಲಿನ ಬೆಳಗುಂಬ ಗ್ರಾಮದಲ್ಲಿ ಭಾರತೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್‌ಗೆ ಗುತ್ತಿಗೆ ಆಧಾರದಲ್ಲಿ ಮಂಜೂರಾಗಿರುವ 2 ಎಕರೆ ಜಮೀನು ಬಳಕೆಗೆ ವಿಧಿಸಲಾಗಿದ್ದ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್ ಹಾಗೂ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಆಫೀಸರ್‌ಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿ, ಜಮೀನಿನನಲ್ಲಿ ಸಮ್ಮೇಳನ ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಬೆಳಗುಂಬ ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತ್ತು.ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ ತುಮಕೂರು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಬೇಕು. ಒಂದೊಮ್ಮೆ ಅರ್ಜಿದಾರರು ಆರೋಪಿಸಿರುವಂತೆ ಗುತ್ತಿಗೆ ಆಧಾರದಲ್ಲಿ ಮಂಜೂರು ಆಗಿರುವ 2 ಎಕರೆ ಜಮೀನಿನ ಬಳಕೆಯಲ್ಲಿ ತುಮಕೂರಿನ ಭಾರತೀಯ ಸ್ಕೌಟ್ ಆ್ಯಂಡ್ ಗೈಡ್ಸ್ ಅಸೋಸಿಯೇಷನ್ ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿ, ವಾಣಿಜ್ಯ ಉದ್ದೇಶದಿಂದ ಆ ಜಾಗದಲ್ಲಿ ಸಮ್ಮೇಳನ ಸಭಾಂಗಣ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ. ಈ ಸಂಬಂಧ ಮಧುಗಿರಿಯ ವಕೀಲ ರಾಘವೇಂದ್ರ ಎ.ಎಸ್. ವಾದ ಮಂಡಿಸಿದ್ದರು.ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬೆಳಗುಂಬ ವೆಂಕಟೇಶ್ ಸರ್ಕಾರದ ಜಾಗಗಳು ಅನ್ಯ ಉದ್ದೇಶಕ್ಕೆ ಬಳಕೆ ಆಗಬಾರದು, ಸಾರ್ವಜನಿಕರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಸರ್ಕಾರಿ ಜಾಗಗಳನ್ನು ನೀಡಬೇಕು, ಸ್ಕೌಟ್ಸ್ ಅಂಡ್ ಗೈಡ್ಸ್‌ಗೆ ನೀಡಿರುವ ಜಾಗ ಸದುದ್ದೇಶಕ್ಕೆ ಬಳಕೆಯಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರುವ ಕಾರ್ಯವಾಗಿತ್ತು, ಇದೀಗ ಕೋರ್ಟ್ ನಮ್ಮ ಅರ್ಜಿ ಪುರಸ್ಕರಿಸಿ ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್‌ಗೆ ಪರಿಶೀಲನೆಗೆ ನಿರ್ದೇಶನ ನೀಡಿರುವುದು ನಮ್ಮ ಹೋರಾಟಕ್ಕೆ ಪ್ರತಿಫಲ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಬೆಳಗುಂಬ ಗ್ರಾಮ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವುದರಿಂದ ಈ ಜಾಗದಲ್ಲಿ ಕಚೇರಿಯೋ ಅಥವಾ ಸರ್ಕಾರಿ ಪ್ರೌಢಶಾಲೆ ತೆರೆಯುವುದರಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ, ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.