ಕನ್ನಡಪ್ರಭ ವಾರ್ತೆ ಆಳಂದ
ಪಟ್ಟಣದಲ್ಲಿ ವಕ್ಫ್ ಆಸ್ತಿ ನೋಂದಣಿ ಹೆಸರಿನಲ್ಲಿ ಪುರಸಭೆ ಮುಖ್ಯಾಧಿಕಾರಿ ಯಾರ ಗಮನಕ್ಕೂ ತರದೇ ತಮ್ಮ ಮನಸ್ಸಿಗೆ ಬಂದಂತೆ ಸರ್ಕಾರದ ಮತ್ತು ಖಾಸಗಿಯವರ ಆಸ್ತಿಗಳನ್ನು ವಕ್ಫ್ ಆಸ್ತಿಯೆಂದು ಇ-ತಂತ್ರಾಂಶದಲ್ಲಿ ಅಳವಡಿಸುತ್ತಿದ್ದು, ಈಗ ಹೊರಡಿಸಿರುವ ಸೂಚನೆ ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಎಚ್ಚರಿಕೆ ನೀಡಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ಶ್ರೀರಾಮ ಮಾರುಕಟ್ಟೆ ಆವರಣದ ವಿವಾದಿತ ಮಸೀದಿ, ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಎಪಿಎಂಸಿ ಜಾಗ, ಹಳೆಯ ಅನ್ಸಾರಿ ಮೋಹಲ್ಲಾದಲ್ಲಿರುವ ಸರ್ಕಾರಿ ಗ್ರಂಥಾಲಯ ಕಟ್ಟಡ ಸೇರಿದಂತೆ ಅನೇಕ ಆಸ್ತಿಗಳನ್ನು ಪುರಸಭೆ ಮುಖ್ಯಾಧಿಕಾರಿ ವಕ್ಫ್ ಆಸ್ತಿ ಎಂದು ನಮೂದಿಸುತ್ತಿದ್ದಾರೆ ಎಂದು ದೂರಿದರು.
ಸಾರ್ವಜನಿಕರ ಗಮನಕ್ಕೆ ತರದೆ ಹಳೆಯ ದಿನಾಂಕವನ್ನು ನಮೂದಿಸಿ ನೋಟಿಸ್ ಹೊರ ತಂದಿದ್ದಾರೆ, ನೋಟಿಸ್‍ಗೆ ಆಕ್ಷೇಪಣೆ ಸಲ್ಲಿಸಲು ಕೇವಲ 7 ದಿನ ಕಾಲಾವಕಾಶ ನೀಡಿದ್ದು, ಈ ಕುರಿತು ಯಾವ ಪುರಸಭೆಯ ಸದಸ್ಯರ ಗಮನಕ್ಕೂ ತಂದಿಲ್ಲ ಎಂದು ಆರೋಪಿಸಿದರು.ಅಧಿಕಾರಿಗಳ ನಿಷ್ಕಾಳಜಿಯಿಂದ ರೈತರಿಗೆ ಸರಿಯಾದ ಪ್ರಮಣದಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಾಗುತ್ತಿಲ್ಲ. ಆಳಂದ ತಾಲೂಕಿನ ಕೆಲವು ಹೋಬಳಿಗಳಲ್ಲಿ ಮಾತ್ರ ಬೆಳೆ ವಿಮೆ ಮಂಜೂರಿಯಾಗುತ್ತಿದೆ ಇದಕ್ಕೆ ನೇರ ಕಾರಣ ಶಾಸಕ ಬಿ.ಆರ್.ಪಾಟೀಲರಾಗಿದ್ದಾರೆ. ತಮಗೆ ಮತ ಕಡಿಮೆ ಬಂದ ಹೋಬಳಿ ಹಾಗೂ ಗ್ರಾಮಗಳಿಗೆ ಸೂಕ್ತ ಬೆಳೆ ವಿಮೆ ಮಂಜೂರು ಮಾಡಬಾರದೆಂದು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸರ್ಕಾರ ಉದ್ದು, ಹೆಸರು ಮತ್ತು ಸೋಯಾಬಿನ್ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದರೂ ಕೂಡ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆಗೆದಿಲ್ಲ. ಇದರಿಂದ ರೈತಾಪಿ ವರ್ಗಕ್ಕೆ ನಷ್ಟವಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ದರ ದೊರೆಯುತ್ತಿಲ್ಲ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ಪ್ರತಿ ರೈತರಿಂದ ಅನಿರ್ಭಂದಿತವಾಗಿ ಉದ್ದು, ಹೆಸರು ಖರೀದಿ ಮಾಡಬೇಕು.ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಬಾರದೆ ಬಡ ಹಾಗೂ ಮಧ್ಯವರ್ಗದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಕೈಬಿಡುವ ಪರಿಸ್ಥಿತಿ ಎದುಸುತ್ತಿದ್ದಾರೆ. ಕೂಡಲೇ ಶಿಷ್ಯವೇತನ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ಶ್ರೀಶೈಲ ಖಜೂರಿ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಶ್ರೀಶೈಲ ಪಾಟೀಲ, ಮೃತ್ಯುಂಜಯ ಆಲೂರ, ವಿಜಯಕುಮಾರ ಕೋಥಳಿಕರ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
ರಸ್ತೆ ಅಗಲೀಕರಣ ಸಂತ್ರಸ್ತರಿಗೆ ಪರಿಹಾರ ಕೊಡಿ
ಆಳಂದ ಪಟ್ಟಣದಲ್ಲಿನ ಮುಖ್ಯ ರಸ್ತೆ ಅಗಲೀಕರಣ ಕಾರ್ಯಕ್ಕೆ ಮುಂದಾಗಿರುವ ಪುರಸಭೆ ಆಡಳಿತಕ್ಕೆ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ರಸ್ತೆ ಅಗಲೀಕರಣದಲ್ಲಿ ಆಸ್ತಿ ಕಳದೆಕೊಳ್ಳುವ ಸಂತ್ರಸ್ತರಿಗೆ ಮೊದಲು ಪರಿಹಾರ ನೀಡಿ ನಂತರ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೊಂಡರೆ ಯಾವುದೇ ತಕರಾರಿಲ್ಲ ಎಂದು ತಿರುಗಿಬಾಣ ಬಿಡುವ ಮೂಲಕ ಹಾಲಿ ಶಾಸಕರಿಗೆ ಅಪರೋಕ್ಷವಾಗಿ ಸವಾಲೊಡ್ಡಿದರು.
ತಮ್ಮ ಅಧಿಕಾರವಧಿಯಲ್ಲಿ ರಸ್ತೆ ಅಗಲೀಕರಣಕ್ಕೆ ಮುಂದಾದಾಗ ಆಸ್ತಿ ಕಳೆದುಕೊಳ್ಳುವ ಮಾಲೀಕರಿಗೆ ಪರಿಹಾರಕೊಟ್ಟು ತೆರವುಗೊಳಿಸಬೇಕು ಎಂದು ಅಂದು ಬಿ.ಆರ್.ಪಾಟೀಲರು ಹೇಳಿಕೆ ನೀಡಿದ್ದರು. ಆದರೀಗ ಅವರೇ ಅಧಿಕಾರದಲ್ಲಿದ್ದಾರೆ, ಮೊದಲು ಪರಿಹಾರ ಕೊಟ್ಟು ರಸ್ತೆ ಅಗಲೀಕರಣ ಮಾಡಲಿ, ಅದಕ್ಕೆ ನಮ್ಮ ಅಡ್ಡಿಯಲ್ಲ ಎಂದರು.