ಹೊಸಪೇಟೆ: ಇಲ್ಲಿನ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ 20ನೇ ವಾರ್ಡ್ ಸದಸ್ಯ ಕೆ. ಮಹೇಶಕುಮಾರ ಅಲಿಯಾಸ್ ಕಾರದಪುಡಿ ಮಹೇಶ್ ಕಾಂಗ್ರೆಸ್ ವಿಪ್ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದುಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿ ಅ.3ರಂದು ಈ ಕುರಿತು ವಿಚಾರಣೆ ನಡೆಸಿ ವಾದ-ಪ್ರತಿವಾದ ಆಲಿಸಿದ್ದರು. ವಿಚಾರಣೆ ವೇಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸಭೆಗೆ ಗೈರು ಹಾಜರಾಗಿರುವೆ ಎಂದು ಕೆ. ಮಹೇಶಕುಮಾರ ತಿಳಿಸಿದ್ದರು. ಆದರೆ, ಸಿರಾಜ್ ಶೇಕ್ ಉದ್ದೇಶಪೂರ್ವಕವಾಗಿ ಗೈರು ಹಾಜರಾಗಿ ಪಕ್ಷದ ಅಭ್ಯರ್ಥಿಗಳಾದ ಅಸ್ಲಂ ಹಾಗೂ ಎಚ್.ರಾಘವೇಂದ್ರ ಅವರನ್ನು ಸೋಲಿಸಿದ್ದಾರೆ. ಪಕ್ಷದ ವಿಪ್ ಉಲ್ಲಂಘಿಸಿದ್ದು, ಪಕ್ಷಾಂತರ ನಿಷೇಧ ನಿಯಮದ ಅನ್ವಯ ಅನರ್ಹಗೊಳಿಸಬೇಕು ಎಂದು ಪಕ್ಷದ ಜಿಲ್ಲಾಧ್ಯಕ್ಷರು ವಾದ ಮಂಡಿಸಿದ್ದರು.
ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987 ನಿಯಮ 3ರ ಅನ್ವಯ ಹೊಸಪೇಟೆ ನಗರಸಭೆ 20ನೇ ವಾರ್ಡ್‌ನ ಸದಸ್ಯ ಕೆ. ಮಹೇಶ್‌ಕುಮಾರ ಅವರ ನಗರಸಭೆ ಸದಸ್ಯತ್ವ ರದ್ದುಗೊಳಿಸಿ ಅ.24ರಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಆದೇಶಿಸಿದ್ದಾರೆ. ಈಗಾಗಲೇ ಬೇಲೆಕೇರಿ ಅದಿರು ಪ್ರಕರಣದಲ್ಲಿ ಮಹೇಶ್‌ಕುಮಾರ ಜೈಲು ಶಿಕ್ಷೆಗೊಳಗಾಗಿದ್ದಾರೆ.ಹೊಸಪೇಟೆ ನಗರಸಭೆ ಸದಸ್ಯ ಕೆ. ಮಹೇಶ್‌ಕುಮಾರ ಸದಸ್ಯತ್ವ ರದ್ದುಗೊಳಿಸಿರುವುದು ಪಕ್ಷದ ವಿಪ್ ಉಲ್ಲಂಘನೆ ಮಾಡಿದವರಿಗೆ ಪಾಠ ಆಗಲಿದೆ. ಪಕ್ಷಕ್ಕೆ ದ್ರೋಹ ಬಗೆಯುವವರಿಗೆ ಎಚ್ಚರಿಕೆ ಗಂಟೆಯಾಗಲಿದೆ ಎನ್ನುತ್ತಾರೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್.