ಕನ್ನಡಪ್ರಭ ವಾರ್ತೆ ಬೀದರ್
ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಹಿಂದಿ ಅಧಿಕೃತ ರಾಷ್ಟ್ರೀಯ ಭಾಷೆಯಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಕನ್ನಡ ಸೇರಿದಂತೆ 22 ಭಾಷೆಗಳಲ್ಲಿ ಅದು ಕೂಡ ಒಂದು. ಆದರೆ, ದೇಶದ ಎಲ್ಲೆಡೆ ಹಿಂದಿ ಭಾಷೆ ಹೇರಲು ಕೇಂದ್ರ ಸರ್ಕಾರದ ಜನರ ತೆರಿಗೆ ಹಣದಲ್ಲಿ ಹಿಂದಿ ಭಾಷೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸರಿಯಲ್ಲ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಹೇಳಿದರು.ಕೇಂದ್ರ ಸರ್ಕಾರ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ ಎಲ್ಲ 22 ಭಾಷೆಗಳನ್ನೂ ಅಧಿಕೃತ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿಗೆ ವಿಶೇಷ ಮನ್ನಣೆ ನೀಡುವ 343 ರಿಂದ 351ನೇ ವಿಧಿಗಳನ್ನು ರದ್ದುಪಡಿಸಿ ಎಲ್ಲ ಭಾಷೆಗಳು ಸಮಾನ ಎಂದು ಸಾರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಮುಖಂಡರಾದ ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ಶಿವರುದ್ರ ತೀರ್ಥ, ಮಲ್ಲಿಕಾರ್ಜುನ ಸಿಕೇನಪುರೆ, ಗೋಪಾಲ ಕುಲಕರ್ಣಿ, ವೀರಶೆಟ್ಟಿ ಗೌಸಪುರೆ, ವಿರೇಶ ರೆಡ್ಡಿ, ಮಹೇಶ ಕಾಪಸೆ ಹಾಗೂ ತುಕಾರಾಮ ಜೈರಾಮ್ ಮತ್ತಿತರರು ಭಾಗವಹಿಸಿದ್ದರು.