ರೋಣ: ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾನಿಯಾಗಿದ್ದ ಬೆಳೆಗೆ ಸರ್ಕಾರ ಶೀಘ್ರ ಪರಿಹಾರ ವಿತರಣೆ ಹಾಗೂ ಬೆಳೆ ವಿಮೆ ಮಂಜೂರು ಮಾಡಬೇಕು. ವಿಳಂಬ ಮಾಡಿದಲ್ಲಿ ರೈತರು ರೈತ ಸಂಘದಿಂದ ಬೀದಿಗಿಳಿದು ಉಗ್ರ ಹೋರಾಟ ನಡೆಸುವರು ಎಂದು ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಸಿದೆ.
ಗುರುವಾರ ಪಟ್ಟಣದಲ್ಲಿ ರೋಣ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ರೈತ ಸಂಘ ತಾಲೂಕು ಅಧ್ಯಕ್ಷ ಸಂಗಮೇಶ ಪವಾಡಶೆಟ್ಟಿ ಮಾತನಾಡಿ, ಅತಿವೃಷ್ಟಿಯಿಂದ ರೋಣ ತಾಲೂಕಿನಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು, ತಾಲೂಕು ಆಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಈ ಕುರಿತು ಸಮೀಕ್ಷೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎನ್ನುತ್ತಿದ್ದಾರೆ. ಆದರೆ ಈ ವರೆಗೂ ಬೆಳೆ ಹಾನಿ ಪರಿಹಾರ ವಿತರಣೆಯಾಗಿಲ್ಲ. ಅಲ್ಲದೇ ಬೆಳೆ ಹಾನಿ ಸಮೀಕ್ಷೆಯೂ ಸಮರ್ಪಕವಾಗಿಯೂ ನಡೆದಿಲ್ಲ. ರೈತ ಸಮುದಾಯ ನಿರಂತರ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕುತ್ತದೆ. ಅಲ್ಪಸ್ವಲ್ಪ ಬಂದಿರುವ ಬೆಳೆಗೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇರುವುದಿಲ್ಲ. ಹೀಗಾದಲ್ಲಿ ರೈತರ ಬದುಕುವುದಾದರೂ ಹೇಗೆ? ಕುಟುಂಬ ನಿರ್ವಹಣೆ ಕಷ್ಟಕರವಾಗುತ್ತಿದೆ. ಆದ್ದರಿಂದ ಸರ್ಕಾರ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಮೇಘರಾಜ ಬಾವಿ ಮಾತನಾಡಿ, ಅತಿವೃಷ್ಟಿಯಿಂದಾದ ಬೆಳೆ ಹಾನಿ ಪರಿಹಾರ ವಿತರಣೆಯಾಗಿಲ್ಲ. ಹಾನಿಗೊಳಗಾದ ಬೆಳೆಗಳ ವಿಮೆಯೂ ಬಿಡುಗಡೆಯಾಗಿಲ್ಲ. ರೈತರ ಬೆಳೆಗೂ ಸೂಕ್ತ ಬೆಲೆ ಸಿಗುತ್ತಿಲ್ಲ. ನಿರಂತರ ರೈತರ ಶೋಷಣೆಗೊಳಗಾಗುತ್ತಿದ್ದಾರೆ. ಸರ್ಕಾರ ರೈತರ ತೊಂದರೆ ಅರಿಯಬೇಕು. ಈರುಳ್ಳಿ, ಕಡಲೆ, ಗೋವಿನಜೋಳ, ಹೆಸರು, ಜೋಳ ಸೇರಿದಂತೆ ಪ್ರತಿಯೊಂದು ಬೆಳೆ ಬೆಲೆ ನಿಗದಿ ಮಾಡಿ, ಗ್ರಾಪಂ, ಹೋಬಳಿ, ತಾಲೂಕು ಕೇಂದ್ರಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು. ಬೆಳೆ ಸಮೀಕ್ಷೆ ಕೈಗೊಂಡ ತಕ್ಷಣವೇ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿದರು.ಉಗ್ರ ಹೋರಾಟ ಎಚ್ಚರಿಕೆ: ಪಟ್ಟಣದ ಎಪಿಎಂಸಿ ಆವರಣದಿಂದ ತಹಸೀಲ್ದಾರ್ ಕಚೇರಿ ವರೆಗೂ ಕರ್ನಾಟಕ ರೈತ ಸಂಘ ತಾಲೂಕು ಘಟಕ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡು, ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಶೀಘ್ರ ಬೆಳೆ ಹಾನಿ ಪರಿಹಾರ ವಿತರಣೆ ಮಾಡದಿದ್ದಲ್ಲಿ ರೈತ ಸಂಘ ನೇತೃತ್ವದಲ್ಲಿ ರಸ್ತೆ ತಡೆ, ತಾಲೂಕು, ಜಿಲ್ಲಾ ಆಡಳಿತ ಕಚೇರಿ ಎದುರು ಉಗ್ರ ಸ್ವರೂಪದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರೈತ ಜಿಲ್ಲಾಧ್ಯಕ್ಷ ಮುತ್ತಣ್ಣಗೌಡ ಚೌಡರಡ್ಡಿ, ಸಂಗಣ್ಣ ದಂಡಿನ, ಯಮನೂರಸಾಬ ಬಿಚ್ಚುಮನಿ, ರುದ್ರಯ್ಯ ಸಾಲಿಮಠ, ರಾಮಪ್ಪ ಕುಂಬಾರ, ಬಸವರಾಜ ಜಕ್ಕಲಿ, ಸಿದ್ದು ಕಂಠಿ, ಮಲ್ಲಿಕಾರ್ಜುನ ಶೀಲವಂತರ, ರಾಮಣ್ಣ ಸೂಡಿ, ಚಂದ್ರಶೇಖರಯ್ಯ ವಸ್ತ್ರದ, ವೀರಪ್ಪ ತಳವಾರ, ಬಸವರಾಜ ತಳಕಲ್ಲ, ಹನುಮಂತಪ್ಪ ದಾಸರ, ಬಸವರಾಜ ಹೊಸಮನಿ, ವೀರಪ್ಪ ದೊಡ್ಡಣ್ಣವರ, ಸಂಗಣ್ಣ ಪವಾಡಶೆಟ್ಟಿ, ಗೋವಿಂದಪ್ಪ ಕಿರಟಗೇರಿ, ಅಶೋಕಜ್ಜ ಹಿರೇಮಠ, ಮಹಾದೇವಗೌಡ ಪಾಟೀಲ ಹಾಗೂ ಅಬ್ಬಿಗೇರಿ, ಸವಡಿ, ಮುದೇನಗುಡಿ, ಅರಹುಣಸಿ, ಸಂದಿಗವಾಡ, ಚಿಕ್ಕಮಣ್ಣೂರ, ಜುಗಳೂರ, ಜಕ್ಕಲಿ ಗ್ರಾಮಗಳ ರೈತರು ಭಾಗವಹಿಸಿದ್ದರು.