ನಸೀರ್ ಅಹ್ಮದ್ ರಾಜೀನಾಮೆ ಪಡೆದರೆ ಉಗ್ರ ಹೋರಾಟ

KannadaprabhaNewsNetwork |  
Published : Apr 13, 2026, 01:15 AM IST
೧೨ಕೆಎಲ್‌ಆರ್-೫ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ರ ರಾಜೀನಾಮೆ ನೀಡಬೇಕು ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನಲೆ ರಾಜೀನಾಮೆ ಪಡೆಯಬಾರದೆಂದು ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರು, ಅಹಿಂದ ವರ್ಗವೇ ಕಾರಣ ಅವರನ್ನು ಒಗ್ಗೂಡಿಸುವ ಕೆಲಸವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ರಾಜೀನಾಮೆ ನೀಡಬೇಕು ಎಂಬ ಸುದ್ದಿ ಹರಿದಾಡುತ್ತಿದ್ದು, ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಪಡೆಯಬಾರದು. ಪಡೆದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಿಲ್ಲಬೇಕು ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಭಾನುವಾರ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮೂಲಕ ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಎಚ್ಚರಿಕೆ ನೀಡಿದರು.ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಎನ್. ಅಂಬರೀಷ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರು, ಅಹಿಂದ ವರ್ಗವೇ ಕಾರಣ ಅವರನ್ನು ಒಗ್ಗೂಡಿಸುವ ಕೆಲಸವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾಡಿದ್ದಾರೆ. ಅವರು ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ನಾಯಕರಾಗಿ ಗುರುತಿಸಿಕೊಂಡಿದ್ದು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶನ ಮೇರೆಗೆ ಬಾಗಲಕೋಟೆಯಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆ ಮುಗಿದ ನಂತರ ಸುಳ್ಳು ಆರೋಪಗಳನ್ನು ಹೊರಿಸಿ ರಾಜೀನಾಮೆ ಕೇಳುವ ಪ್ರಶ್ನೆ ಇಲ್ಲ. ಅವರ ವಿರುದ್ಧ ನಡೆಯುತ್ತಿರುವ ವಿನಾಕಾರಣದ ರಾಜಕೀಯದ ಷಡ್ಯಂತ್ರ ನಿಲ್ಲಬೇಕು ಎಂದು ಒತ್ತಾಯಿಸಿದರು.ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ನಂತರದಿಂದ ನಿರಂತರವಾಗಿ ಅಲ್ಪಸಂಖ್ಯಾತರಿಗೆ, ದಲಿತರಿಗೆ ಅಹಿಂದ ವರ್ಗದ ಮೇಲೆ ಬಟ್ಟೆ ಮತ್ತು ಆಹಾರದ ವಿಚಾರದಲ್ಲಿ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಿವೆ. ಅದರ ವಿರುದ್ಧ ಧ್ವನಿಯಾಗಿ ನಿಂತಿದ್ದು ನಸೀರ್ ಅಹಮದ್ ಅವರು ಅಂತವರ ವಿರುದ್ಧ ರಾಜಕೀಯ ಷಡ್ಯಂತ್ರ ಕೂಡಲೇ ನಿಲ್ಲಬೇಕು. ಕೋಲಾರ ಜಿಲ್ಲೆಯಲ್ಲಿ ಕಳೆದ ೨೦೨೩ ರ ವಿಧಾನಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಶೆ. 100 ಕಾಂಗ್ರೆಸ್ ಪಕ್ಷಕ್ಕೆ ವೋಟು ಕೊಡಲು ಇವರೆ ಕಾರಣವಾಗಿದ್ದು, ಅವರು ಅಲ್ಪಸಂಖ್ಯಾತರ ದೊಡ್ಡ ಶಕ್ತಿಯಾಗಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಮರೆಯಬಾರದು ಎಂದರು.ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ೪೦ ವರ್ಷಗಳ ಕಾಲ ನಿಷ್ಠಾವಂತ ಕಾರ್ಯಕರ್ತರಾಗಿ ಪ್ರಾಮಾಣಿಕವಾಗಿ ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕೆಲಸ ಮಾಡಿದ್ದಾರೆ. ಅಂತಹವರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಅವರನ್ನು ರಾಜೀನಾಮೆ ಕೊಡಿಸಿದರೆ ರಾಜ್ಯದಲ್ಲಿ ಅಲ್ಪಸಂಖ್ಯಾತರು ಹಾಗೂ ಅಹಿಂದ ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಹಾಗೂ ಬೆಂಗಳೂರಿನ ಮೂರು ಜಿಲ್ಲೆಗಳ ಮತದಾರರಿಂದ ಮುಂದಿನ ದಿನಗಳಲ್ಲಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಎಚ್ಚತ್ತುಕೊಳ್ಳಬೇಕು ಎಂದು ಮನವಿ ಮಾಡಿದರು.ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ಸರ್ ಮಾತನಾಡಿ, ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಸೀರ್ ಅಹಮದ್ ಅವರಿಗೆ ಬಾಗಲಕೋಟೆಯ ಜವಾಬ್ದಾರಿ ನೀಡಲಾಗಿತ್ತು. ಅಲ್ಲಿ ಒಂದು ವಾರಗಳ ಕಾಲ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಸೋಲು ಆದರೆ ಅವರ ವಿರುದ್ಧ ಕ್ರಮವಾಗಲಿ ಅದು ಬಿಟ್ಟು ದಾವಣಗೆರೆ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ವೋಟ್ ಹಾಕಿಲ್ಲ ಅಂತ ಸುಳ್ಳು ಅಪಪ್ರಚಾರಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹಾಕುವುದು ಒಳ್ಳೆಯ ಬೆಳವಣಿಗೆ ಅಲ್ಲ. ನಸೀರ್ ಅಹಮದ್ ಪ್ರಶ್ನಾತೀತ ನಾಯಕರು. ಅವರನ್ನು ರಾಜಕೀಯವಾಗಿ ತುಳಿಯುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಕೆಎಂಡಿಸಿ ರಾಜ್ಯ ನಿರ್ದೇಶಕ ಅಬ್ದುಲ್ ಖಯ್ಯುಂ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಕಾಂಗ್ರೆಸ್ ಹಿರಿಯ ಮುಖಂಡರಾದ ಕಠಾರಿಪಾಳ್ಯ ಗಂಗಣ್ಣ, ರವಿರಾಮಸ್ವಾಮಿ, ಜಫರುಲ್ಲಾ ಖಾನ್, ಷಂಷೀರ್, ಕುರಿಗಳ ರಮೇಶ್, ಲಕ್ಷ್ಮೀದೇವಮ್ಮ, ಚಂದ್ರಮೌಳಿ, ಅಮರ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಫೈರೋಜ್ ಖಾನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸೈಯದ್ ಆಫ್ರಿದ್, ಜಾವೀದ್, ಯುವ ಮುಖಂಡರಾದ ಮನ್ಸೂರ್ ಅಲಿ, ಬಾಬರ್, ನದೀಂ ಬೇಗ್, ನೂರ್, ಸಾಧೀಕ್, ಗೋರು, ಭರತ್, ಕಾಮ್ರಾನ್, ಅರ್ಬಾಜ್, ಸಕ್ಲೈನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಚಂಡಿಕಾ ಹೋಮ
ಭಾರತದ ನರ್ಸಿಂಗ್‌ಗೆ ವಿಶ್ವಾದ್ಯಂತ ಬೇಡಿಕೆ: ದಿನೇಶ್‌